ಸೋರುತ್ತಿರುವ ಪುತ್ರಬೈಲು ಸಮಾಜ ಮಂದಿರ.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಲಾಯಿಲ ಗ್ರಾಮದ ಪುತ್ರಬೈಲು ಪ್ರದೇಶದಲ್ಲಿರುವ ಸಮಾಜ ಮಂದಿರವು ಇದೀಗ ಶಿಥಿಲಾವಸ್ಥೆಗೆ ತಲುಪಿದ್ದು, ಮಳೆಗಾಲದಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟಡ ಕುಸಿಯುವ ಆತಂಕ ಎದುರಾಗಿದೆ.
ಹೆಂಚಿನ ಮೇಲ್ಛಾವಣಿ ಹೊಂದಿರುವ ಈ ಸಮಾಜ ಮಂದಿರವು ಹಲವು ವರ್ಷಗಳಿಂದ ಸ್ಥಳೀಯ ಗ್ರಾಮಸ್ಥರ ವಿವಿಧ ಚಟುವಟಿಕೆಗಳಿಗೆ ಆಸರೆಯಾಗಿತ್ತು. ಈ ಭಾಗದಲ್ಲಿ ಹಲವಾರು ಕುಟುಂಬಗಳು ವಾಸಿಸುತ್ತಿದ್ದು, ಸಂಘ-ಸಂಸ್ಥೆಗಳ ಸಭೆ, ಸಣ್ಣಪುಟ್ಟ ಕಾರ್ಯಕ್ರಮಗಳು ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳು ಸಮಾಜ ಮಂದಿರದಲ್ಲಿ ನಡೆಯುತ್ತಿದ್ದವು. ಆದರೆ, ಕಟ್ಟಡದ ಒಂದು ಪಾರ್ಶ್ವದಲ್ಲಿ ಸೋರಿಕೆ ಹೆಚ್ಚಾಗಿರುವುದರಿಂದ ಮೇಲ್ಛಾವಣಿ ಹಾಗೂ ಕಟ್ಟಡದ ಭಾಗಗಳು ದುರ್ಬಲಗೊಂಡಿದ್ದು, ಯಾವುದೇ ಸಂದರ್ಭದಲ್ಲಿ ಕುಸಿಯುವ ಅಪಾಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಹಲವು ವರ್ಷಗಳ ಪ್ರಯತ್ನ ಹಾಗೂ ಹೋರಾಟದ ಫಲವಾಗಿ ಪುತ್ರಬೈಲು ಪ್ರದೇಶದಲ್ಲಿ ಗ್ರಂಥಾಲಯವೊಂದು ನಿರ್ಮಾಣಗೊಂಡಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಇದೇ ರೀತಿಯಲ್ಲಿ ಸಮಾಜ ಮಂದಿರದ ಸಮಸ್ಯೆಯನ್ನೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
ನೂತನ ಭವನ ನಿರ್ಮಾಣಕ್ಕೆ ಆಗ್ರಹ: ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಾಜ ಮಂದಿರದ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ಕಟ್ಟಡ ಅಪಾಯಕಾರಿಯಾಗಿದ್ದರೆ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು. ಈ ಮೂಲಕ ಪುತ್ರಬೈಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಬಹುಕಾಲದ ಬೇಡಿಕೆ ಈಡೇರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮಳೆ ನೀರು ಸೋರುವುದರಿಂದ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳನ್ನು ನಡೆಸದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಕಟ್ಟಡವನ್ನು ತಕ್ಷಣ ಪರಿಶೀಲಿಸಿ ಅಗತ್ಯ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಅಥವಾ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಅದರ ಜಾಗದಲ್ಲೇ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಸಮುದಾಯ ಭವನ ನಿರ್ಮಿಸಬೇಕು ಎಂಬುದು ಸ್ಥಳೀಯರ ಪ್ರಮುಖ ಬೇಡಿಕೆಯಾಗಿದೆ. ಈಗಿರುವ ಕಟ್ಟಡ ಸಣ್ಣದಾಗಿದ್ದು ವಿಸ್ತಾರವಾದ ಕಟ್ಟಡ ಕಟ್ಟಿದರೆ ಅನುಕೂಲ ಎನ್ನುತ್ತಾರೆ ಸ್ಥಳೀಯರು.
ಸಮಾಜ ಮಂದಿರ ಅಭಿವೃದ್ಧಿ ಬಗ್ಗೆ ಈಗಾಗಲೇ ಸಂಬಂಧಪಟ್ಟ ಹಲವು ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು ನಿರೀಕ್ಷಿತ ಸ್ಪಂದನೆ ದೊರಕದಿರುವುದು ಬೇಸರದ ಸಂಗತಿ. ಪಕ್ಕದಲ್ಲಿರುವ 25 ಸೆಂಟ್ಸ್ ಸರ್ಕಾರಿ ಜಾಗವನ್ನು ಸಮುದಾಯ ಭವನ ಅಭಿವೃದ್ಧಿಗೆ ಮೀಸಲಿಡಬೇಕು ಎನ್ನುವ ಬೇಡಿಕೆಯೂ ನಮ್ಮದು. ಈಗಿರುವ ಸಮಾಜ ಮಂದಿರ ವಿಸ್ತರಿಸಿ ಉತ್ತಮ ಕಟ್ಟಡ ನಿರ್ಮಿಸಿದರೆ ಗ್ರಾಮಸ್ಥರಿಗೆ ಮಾತ್ರವಲ್ಲದೆ ವಿವಿಧ ಸಂಘ-ಸಂಸ್ಥೆಗಳಿಗೂ ಸಭೆ ಹಾಗೂ ಕಾರ್ಯಕ್ರಮ ನಡೆಸಲು ಅನುಕೂಲವಾಗಲಿದೆ.
— ಸುರೇಶ್ ಬೈರ ಸಾಮಾಜಿಕ ಹೋರಾಟಗಾರ