ಉಡುಪಿಯಲ್ಲಿ ಪುಷ್ಪಾನಂದ ಫೌಂಡೇಷನ್ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಡಾ. ಶ್ರುತಿ ಬಲ್ಲಾಳ್ ಉದ್ಘಾಟಿಸಿದರು. ಯಶ್ಪಾಲ್ ಸುವರ್ಣ, ಪ್ರಭಾಕರ್ ಪೂಜಾರಿ, ರಶ್ಮಿ ಸಿ. ಭಟ್, ನಿರುಪಮಾ ಪ್ರಸಾದ್ ಶೆಟ್ಟಿ, ಜಗದೀಶಕುಮಾರ್, ಇಂದಿರಾ ಇದ್ದರು.
* ಮಧುಮೇಹ ಖ್ಯಾತ ತಜ್ಞೆ ಡಾ. ಶ್ರುತಿ ಬಲ್ಲಾಳ್ ಸಲಹೆ
* ಪುಷ್ಪಾನಂದ ಫೌಂಡೇಷನ್ನಿಂದ ಪ್ರತಿಭಾ ಪುರಸ್ಕಾರ ವಿತರಣೆ
ಉಡುಪಿ: ಶಾಸಕ ಯಶ್ಪಾಲ್ ಅವರು ಶಿಕ್ಷಣಕ್ಕೆ ಪ್ರೋತ್ಸಾಹಿಸಲು ನೀಡಿರುವ ಪ್ರತಿಭಾ ಪುರಸ್ಕಾರವು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಸಾಧನೆಗೆ ಸಹಕಾರಿಯಾಗಲಿ. ಶಿಕ್ಷಣಣದೊಂದಿಗೆ ಶಿಸ್ತುಬದ್ಧ ಜೀವನ ಶೈಲಿ ರೂಢಿಸಿಕೊಂಡು ಆರೋಗ್ಯ ರಕ್ಷಣೆಯ ಕಾಳಜಿ ವಹಿಸಬೇಕು. ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿಯೂ ಸಹ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಉಡುಪಿಯ ಖ್ಯಾತ ಮಧುಮೇಹ ತಜ್ಞೆ ಡಾ. ಶ್ರುತಿ ಬಲ್ಲಾಳ್ ಸಲಹೆ ನೀಡಿದರು.
ಉಡುಪಿಯ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಪುಷ್ಪಾನಂದ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಉಡುಪಿ ತಾಲೂಕಿನ 554 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಧನೆ ಪ್ರೇರಣೆಯಾಗಲಿ
ಫೌಂಡೇಷನ್ನ ಪ್ರವರ್ತಕ ಹಾಗೂ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ನನ್ನ ತಂದೆ-ತಾಯಿ ಹೆಸರಿನಲ್ಲಿ ಆರಂಭಿಸಿರುವ ಫೌಂಡೇಷನ್ ಮೂಲಕ ಪ್ರತಿವರ್ಷವೂ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದೇನೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ನನಗೆ ಅತ್ಯಂತ ಸಂತಸ ತರುತ್ತದೆ. ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಸಾಧನೆ ಇನ್ನಿತರ ವಿದ್ಯಾರ್ಥಿಗಳಿಗೂ ಪ್ರೇರಣೆ ನೀಡಲಿ ಎಂದು ಆಶಿಸಿದರು.
ಅಜ್ಜರಕಾಡು ವಾರ್ಡ್ನ ನಗರಸಭಾ ಮಾಜಿ ಸದಸ್ಯೆ ರಶ್ಮಿ ಸಿ. ಭಟ್, ಕಾಲೇಜಿನ ಉಪಾಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಜಗದೀಶಕುಮಾರ್, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಇಂದಿರಾ ಉಪಸ್ಥಿತರಿದ್ದರು. ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಶಾಸಕ ಯಶ್ಪಾಲ್ ಸುವರ್ಣ ಅವರು ಪುಷ್ಪಾನಂದ ಫೌಂಡೇಷನ್ ಹಾಗೂ ಅಧ್ಯಕ್ಷರಾಗಿರುವ ಮೀನು ಮಾರಾಟ ಫೆಡರೇಷನ್ ಮತ್ತು ಮಹಾಲಕ್ಷ್ಮೀ ಬ್ಯಾಂಕ್ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ ಶೈಕ್ಷಣಿಕ ಪ್ರೋತ್ಸಾಹ ನೀಡುತ್ತಾರೆ. ಈ ಕಾರ್ಯವು ಶಿಕ್ಷಣದ ಕುರಿತಾಗಿ ಅವರಿಗಿರುವ ಸಾಮಾಜಿಕ ಬದ್ಧತೆ ತೋರ್ಪಡಿಸುತ್ತಿದೆ.