ಗೌರಿ ಗದ್ದೆಗಿಳಿದು ಭತ್ತದ ಸಸಿಗಳನ್ನು ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ನಾಟಿ ವಾಡಿದರು. ಶಿಷ್ಯರು, ಪರಿಸರದ ರೈತರು, ಮಹಿಳೆಯರು ಸಾಥ್ ನೀಡಿದರು.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ದೇಶದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಭತ್ತದ ತಳಿಗಳಿದ್ದವು. ಕೃಷಿ ನಿರ್ಲಕ್ಷೃದಿಂದಾಗಿ ಅವೆಲ್ಲ ನಶಿಸಿ, ಇಂದು 70 ಸಾವಿರದಷ್ಟು ಉಳಿದಿವೆ. ಇವು ಪ್ರಯೋಗಾಲಯದಲ್ಲಿ ಉಳಿಯದೆ, ಗದ್ದೆಗಳಲ್ಲಿ ಬೆಳೆದು ಉಳಿಯಬೇಕು ಎಂಬ ಸದುದ್ದೇಶದಿಂದ ‘ಶುದ್ಧ ನೈವೇದ್ಯ ಸಮರ್ಪಣಂ’ ಯೋಜನೆ ರೂಪಿಸಲಾಗಿದೆ. ಈ ಮೂಲಕ ಪಾರಂಪರಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಅಭಿಯಾನ ಆರಂಭಿಸಲಾಗಿದೆ ಎಂದು ಸೋದೆ ಶ್ರೀ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು.
ಶ್ರೀ ವಾದಿರಾಜ ಯತಿಗಳ ಅವತಾರ ಭೂಮಿ ಹೂವಿನ ಕೆರೆಯ ಗೌರಿ ಗದ್ದೆಯಲ್ಲಿ ಭತ್ತ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಕೃಷಿ ಪ್ರಯೋಗ ಪರಿವಾರದ ಹಾದಿಗಲ್ಲು ಲಕ್ಷ್ಮೀನಾರಾಯಣ ವಾತನಾಡಿ, ಒಡಿಶಾದ ಪುರಿ ಜಗನ್ನಾಥನಿಗೆ ದಿನಕ್ಕೊಂದು ತಳಿಯ ಅನ್ನ ನೈವೇದ್ಯ ವಾಡಲಾಗುತ್ತಿದೆ. ಅನ್ನಬ್ರಹ್ಮ ಎಂದೇ ಖ್ಯಾತನಾದ ಉಡುಪಿಯ ಕೃಷ್ಣನಿಗೆ ಯಾಕೆ ಸಮರ್ಪಿಸಬಾರದು ಎಂದು ಯೋಚಿಸಿದಾಗ, ಸೋದೆ ಸ್ವಾಮೀಜಿ ಒಪ್ಪಿ, ಮುಂಬರುವ ಪರ್ಯಾಯದಿಂದ ಯೋಜನೆ ಅನುಷ್ಠಾನಿಸಲು ಮುಂದಾಗಿರುವುದು ರೈತರಲ್ಲಿ ಉತ್ಸಾಹ ಮೂಡಿಸಿದೆ ಎಂದರು.
ಪ್ರಮುಖರಾದ ಶ್ರೀವತ್ಸ ವಾತನಾಡಿ, ನಮ್ಮಲ್ಲಿ ವೈವಿಧ್ಯಮಯ ಭತ್ತದ ತಳಿಗಳಿವೆ. ಅನ್ನಕ್ಕೆ, ಅವಲಕ್ಕಿಗೆ, ಮುಂಡಕ್ಕಿಗೆ, ಔಷಧಕ್ಕೆ ಹೀಗೆ ಎಲ್ಲಕ್ಕೂ ಸೂಕ್ತವಾಗುವಂಥವುಗಳಿವೆ. ಇವನ್ನು ಉಳಿಸಿಕೊಳ್ಳದಿದ್ದರೆ ಉಂಟಾಗುವ ನಷ್ಟವನ್ನು ಯಾರೂ ಭರಿಸಲಾಗದು ಎಂದರು. ರಮೇಶ್ ಹತ್ವಾರ್ ವಂದಿಸಿದರು.
ಗದ್ದೆಗಿಳಿದು ನಾಟಿ ಮಾಡಿದ ಶ್ರೀಗಳು
ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಗೌರಿ ಗದ್ದೆಗಿಳಿದು ಭತ್ತದ ಸಸಿಗಳನ್ನು ನಾಟಿ ವಾಡುತ್ತಿದ್ದಂತೆ ಶಿಷ್ಯರು, ಪರಿಸರದ ರೈತರು, ಮಹಿಳೆಯರು ಉತ್ಸಾಹದಿಂದ ನಾಟಿ ವಾಡಿದರು. ರಾಮಚಂದ್ರ ವರ್ಣ, ರಾವೇಂದ್ರ ಗುರಿಕಾರ್, ನರಸಿಂಹಮೂರ್ತಿ ಬುಧ್ಯ, ಸೀತಾರಾಮ ಧನ್ಯಾ, ಭಾಗ್ಯಲಕ್ಷ್ಮೀ ಧನ್ಯಾ, ಗಣೇಶ್ ಭಟ್, ವಾದಿರಾಜ ಭಟ್, ಶ್ರೀನಿವಾಸ ಹತ್ವಾರ್, ಸುಜಾತಾ, ವಿಶ್ವನಾಥ ಅಡಿಗ, ಪರಿಮಳ ಅಡಿಗ ಮೊದಲಾದವರು ಸಹಕರಿಸಿದರು.
ಅಭಿಯಾನದಲ್ಲಿ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಹಾಗೂ ಎಲ್ಲೆಡೆಯ ಆಸಕ್ತ ರೈತರು ಕೈ ಜೋಡಿಸಿದ್ದಾರೆ. 2028ರಲ್ಲಿನ ಸೋದೆ ಮಠದ ಪರ್ಯಾಯದಲ್ಲಿ ಉಡುಪಿ ಶ್ರೀಕೃಷ್ಣನಿಗೆ ದಿನಕ್ಕೊಂದು ಬಗೆಯ ತಳಿಯ ಸಾವಯವ ಅನ್ನವನ್ನು ನೈವೇದ್ಯ ಮಾಡುವ ಸಂಕಲ್ಪ ಮಾಡಲಾಗಿದೆ. ಪರ್ಯಾಯದ ಪ್ರಥಮ ದಿನ, ಅನ್ನಬ್ರಹ್ಮನಾದ ಶ್ರೀಕೃಷ್ಣನಿಗೆ ಶ್ರೀ ವಾದಿರಾಜರು ಅವತರಿಸಿದ ಗೌರಿ ಗದ್ದೆಯಲ್ಲಿ ಬೆಳೆದ ಭತ್ತದಿಂದ ತಯಾರಿಸಿದ ಅನ್ನವನ್ನೇ ಸಮರ್ಪಿಸಲಾಗುವುದು. ಪರ್ಯಾಯ ಅವಧಿಯಲ್ಲಿ ದಿನಕ್ಕೊಂದು ತಳಿಯ ಅನ್ನವನ್ನು ನೈವೇದ್ಯ ಮಾಡಲಾಗುವುದು.
— ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಸೋದೆ ಶ್ರೀ ವಾದಿರಾಜ ಮಠಾಧೀಶ