ಉಡುಪಿಯಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಆಯೋಜಿಸಿದ್ದ ಪುರಂದರ ದಾಸರ ಆರಾಧನೋತ್ಸವದಲ್ಲಿ ಸುದೇಶ್​ ಪೂಜಾರಿ ಮಾತನಾಡಿದರು. ಶ್ರೀನಿವಾಸ್​ ರಾವ್​ ಕೆ., ಸುಕೇಶ್​ ಪೂಜಾರಿ ಇದ್ದರು. 
ಉಡುಪಿ

ದಾಸ-ವಚನ ಸಾಹಿತ್ಯ ಕನ್ನಡದ ಕಣ್ಣುಗಳು

* ಸುದೇಶ್​ ಪೂಜಾರಿ ಅಭಿಪ್ರಾಯ

* ಪುರಂದರ ದಾಸರ ಆರಾಧನೋತ್ಸವ

ಉಡುಪಿ: ದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದ್ದು ದಾಸ ಸಾಹಿತ್ಯ ತಿಳಿದುಕೊಳ್ಳುವ ಕೆಲಸವಾಗಬೇಕು. ಪುರಂದರದಾಸರು ಜನ್ಮದಿಂದ ಶ್ರೀಮಂತರಾಗಿದ್ದರೂ ಅದನ್ನು ತೊರೆದು ಆಧ್ಯಾತ್ಮಿಕತೆ ನೆಚ್ಚಿಕೊಂಡರು. ದೇವರ ಸಂಕೀರ್ತನೆ ರಚಿಸಿ, ಹಾಡಿ ದೇವರ ಕುರಿತು ಅರಿವು ಮೂಡಿಸಿದರು. ಕನ್ನಡ ಭಾಷೆಗೆ ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯಗಳು ಎರಡು ಕಣ್ಣುಗಳಿದ್ದಂತೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವುಗಳ ಕೊಡುಗೆ ಮಹತ್ವದ್ದಾಗಿದೆ. ದಾಸ ಸಾಹಿತ್ಯ ಓದಿ ಅರಿತರೆ ಜೀವನ ಸಾರ್ಥಕವಾಗುತ್ತದೆ ಎಂದು ಶಾರದಾ ವಸತಿ ಶಾಲೆಯ ಸಿಬ್ಬಂದಿ ಸುದೇಶ್​ ಪೂಜಾರಿ ಅಭಿಪ್ರಾಯಪಟ್ಟರು.
ಉಡುಪಿಯ ಕಾತ್ಯಾಯಿನಿ ನಗರದಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಭಾನುವಾರ (ಜ.18) ಆಯೋಜಿಸಿದ್ದ ಪುರಂದರ ದಾಸರ ಆರಾಧನೋತ್ಸವದಲ್ಲಿ ಮಾತನಾಡಿದರು.

ಭಕ್ತಿ ಪರಂಪರೆಯ ದಾರಿ

ವೇದಿಕೆಯ ಅಧ್ಯಕ್ಷ ಶ್ರೀನಿವಾಸ್​ ರಾವ್​ ಕೆ. ಮಾತನಾಡಿ, ದಾಸರು ಜಾತಿ-ಧರ್ಮಗಳ ಮಿತಿ ದಾಟಿ ಎಲ್ಲರಲ್ಲೂ ಸಮಾನತೆ ಮೂಡಿಸುವ ಹಾಗೂ ಜನರಲ್ಲಿ ಧರ್ಮ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ತ್ಯಾಗ, ಭಕ್ತಿಯಿಂದ ಮಾತ್ರ ದೇವರ ಒಲುಮೆ ಸಾಧ್ಯವೆಂದು ಮಾರ್ಗದರ್ಶನ ನೀಡಿದರು. ತನ್ಮೂಲಕ ರಾಜ್ಯದಲ್ಲಿ ಭಕ್ತಿ ಪರಂಪರೆಯ ಹೊಸ ದಾರಿ ತೆರೆದರು. ಪುರಂದರ ದಾಸರ ಸಾಹಿತ್ಯದಲ್ಲಿ ಭಕ್ತಿ, ಮೋಕ್ಷ ಮಾರ್ಗ, ಹರಿನಾಮ ಸ್ಮರಣೆ ಹಾಗೂ ಮಹತ್ವ, ಸೇವಾ ಭಾವನೆಗಳನ್ನೂ ಮನೋಜ್ಞವಾಗಿ ವರ್ಣಿಸಲಾಗಿದೆ ಎಂದರು.
ರವೀಂದ್ರ ನಾಯಕ್​ ಮಾತನಾಡಿದರು. ಸುರೇಶ್​ ದೇವಾಡಿಗ, ಶ್ರೀನಿವಾಸ್​ ಡಿ., ಸುದೇಶ್​ ಪೂಜಾರಿ, ಗುಣವತಿ, ಅನುರಾಧಾ ಜಿ.ಎಸ್​., ಹೇಮಲತಾ, ಚಂದ್ರಶೇಖರ್​, ಸುಕೇಶ್​ ಪೂಜಾರಿ, ಸುನಿತಾ, ಜಯಶ್ರೀ, ವಿಜಯಶ್ರೀ, ಲಕ್ಷ್ಮೀ, ವಿಜಯಲಕ್ಷ್ಮೀ, ಉಷಾ, ಪ್ರೇಮಾ, ಮಾಲತಿ, ಭವ್ಯಾ, ಚಂದ್ರಿಕಾ, ಸಂಗೀತಾ, ಸ್ವಾತಿ, ರಾಘವೇಂದ್ರ ಇತರರು ಉಪಸ್ಥಿತರಿದ್ದರು.