ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಚಾರೋಪನ್ಯಾಸ ಉಪನ್ಯಾಸ ಮಾಲಿಕೆ ನೆರವೇರಿತು. ಮನ್ಮಥ ಶೆಟ್ಟಿ ಪುತ್ತೂರು, ಡಾ.ವಿಜಯ ವಿ., ಪ್ರಸಾದ್ ಅಂಚನ್ ಮತ್ತಿತರರಿದ್ದರು.
ದೈವಾರಾಧನೆಯೇ ಈ ಮಣ್ಣಿನ ಮೂಲ ಸತ್ವ ಮತ್ತು ತತ್ವ. ಸಂಧಿಗಳ ಸಮೂಹವೇ ಪಾಡ್ದನ. ಅದು ಒಂದು ನಿಖರವಾದ ಮಾಹಿತಿ. ಒಂದು ದೈವದ ಹುಟ್ಟು-ಕಟ್ಟು-ಆಯ-ಬೀರ ಇವುಗಳು ಸಂಧಿಗಳಲ್ಲಿ ವ್ಯಕ್ತವಾಗುವ ವಿವಿಧ ಆಯಾಮಗಳು. ಇದರ ಆರಂಭ ಮತ್ತು ಅಂತ್ಯ, ಉದ್ದೇಶ ಒಂದೇ ಆಗಿದ್ದು, ಅದರ ಮಧ್ಯೆ ಪ್ರಾದೇಶಿಕ ವ್ಯತ್ಯಾಸಗಳನ್ನು ಕಾಣಬಹುದು. ಪಾಡ್ದನಗಳು ತುಳುನಾಡಿನ ಪುರಾಣ ಪಠ್ಯಗಳಾಗಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ ಪುತ್ತೂರು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಪ್ರಚಾರೋಪನ್ಯಾಸ ಮಾಲಿಕೆಯ ’ದೈವಾರಾಧನೆ: ದೈವ ಕಲತ್ತ ಬೇತೆ ಬೇತೆ ಮರ್ಗಿಲ್-ಗೇನದ ತುಲಿಪು-ಪಾಡ್ದನನ’ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು.
16,400 ಸಾಲುಗಳಿರುವ ಸಿರಿ ಪಾಡ್ದನ ಹಾಡಿದ ಮಾಚಾರು ಗೋಪಾಲ ನಾಯ್ಕರನ್ನು ನೆನಪಿಸುತ್ತಾ, ವಿದೇಶಿಯರು ಬಂದು ಪಾಡ್ದನದ ಬಗೆಗಿನ ಅಧ್ಯಯನ ನಡೆಸಿರುವುದು ನಮಗೆ ಹೆಮ್ಮೆ. ಪಾಡ್ದನ ಪಠ್ಯಗಳನ್ನು ಶೈಕ್ಷಣಿಕ ನೆಲೆಯಲ್ಲಿ ಅಧ್ಯಯನ ನಡೆಸಬೇಕು ಎಂದರು.
ಕಟೀಲು ಕಾಲೇಜಿನ ಪ್ರಾಂಶುಪಾಲ ಡಾ.ವಿಜಯ ವಿ.ಮಾತನಾಡಿ ತುಳುವರ ಮೂಲ ಕೃಷಿ ಬದುಕು, ಇಂದಿನ ಪೀಳಿಗೆ ಇದರಿಂದ ದೂರವಿರುವುದು ಬೇಸರ ಎಂದರು. ತುಳು ಪೀಠದ ಸಹಾಯಕರಾದ ಪ್ರಸಾದ್ ಅಂಚನ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕಿ ಹರಿಣಾಕ್ಷಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೃಥ್ವಿ ಎಚ್.ಪೂಜಾರಿ ನಿರೂಪಿಸಿದರು, ಬಿಂದಿಯಾ ವಂದಿಸಿದರು.