ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಸುಬ್ರಹ್ಮಣ್ಯ, ಡಾ.ಬಸವರಾಜ್​ ಹುಬ್ಬಳ್ಳಿ, ಡಾ. ನಾಗರತ್ನಾ, ಡಾ.ಲತಾ ನಾಯಕ್​, ಡಾ. ಜ್ಯೋತ್ಸ್ನಾ ಬಿ.ಕೆ., ಡಾ. ಎಚ್​.ಅಶೋಕ್​ ಇತರರಿದ್ದರು. 
ಉಡುಪಿ

ಯಶಸ್ವಿಗೊಳಿಸಿ ಪಲ್ಸ್​ ಪೋಲಿಯೋ ಕಾರ್ಯಕ್ರಮ

* ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಸೂಚನೆ

* ಲಸಿಕಾ ಕಾರ್ಯಪಡೆಯ ಸಮನ್ವಯ ಸಮಿತಿ ಸಭೆ

ಉಡುಪಿ: ಜಿಲ್ಲಾದ್ಯಂತ ಪಲ್ಸ್​ ಪೋಲಿಯೋ ಲಸಿಕಾ ಕಾರ್ಯಕ್ರಮವು ಜೂ.28ರಂದು ನಡೆಯಲಿದ್ದು, 5 ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಪಾಲಕರೂ ಸಹ ಸಹಕರಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಮೇ 15)  ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್​ ಪೋಲಿಯೋ ಕಾರ್ಯಕ್ರಮದ ನಿಮಿತ್ತ ಜಿಲ್ಲಾ ಲಸಿಕಾ ಕಾರ್ಯಪಡೆಯ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

ಮುಂಜಾಗ್ರತಾ ಕ್ರಮ

ದೇಶದಲ್ಲಿ 2011ರ ಜನವರಿ 13ರಲ್ಲಿ ಕೊನೆಯದಾಗಿ ಪೋಲಿಯೋ ಪ್ರಕರಣ ವರದಿಯಾಗಿದೆ. 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಪೋಲಿಯೋ ಮುಕ್ತ ದೇಶ ಎಂದು ಘೋಷಿಸಿದೆ. ಆದರೂ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನದಲ್ಲಿ ಪೋಲಿಯೋ ಪ್ರಕರಣ ವರದಿಯಾಗುತ್ತಿದೆ. ಹೀಗಾಗಿ ಹೆಚ್ಚಿನ ನಿಗಾವಹಿಸಲು ಮತ್ತು ಮುಂಜಾಗ್ರತಾ ಕ್ರಮವಾಗಿ ಭಾರತದಲ್ಲಿ ಪೋಲಿಯೋ ಅಭಿಯಾನ ಮುಂದುವರಿಸಲಾಗಿದೆ. ಈ ಕಾಯಿಲೆ ನಿಮೂರ್ಲನೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜ್​ ಹುಬ್ಬಳ್ಳಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನಾ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್​, ಜಿಲ್ಲಾ ಆರ್​ಸಿಎಚ್​ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ., ಜಿಲ್ಲಾ ಸರ್ಜನ್​ ಡಾ. ಎಚ್​.ಅಶೋಕ್​, ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿದ್ದಾರೆ 63,524 ಮಕ್ಕಳು

ಕಳೆದ ವರ್ಷ ಡಿಸೆಂಬರ್​ನಲ್ಲಿ ನಡೆದ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 65,401 ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು, ಶೇ.103 ಗುರಿಮೀರಿ ಸಾಧನೆ ಮಾಡಲಾಗಿದೆ. ಪ್ರಸ್ತುತ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಅಂದಾಜು 63,524 ಮಕ್ಕಳನ್ನು ಗುರುತಿಸಲಾಗಿದ್ದು, ಸಮೀಕ್ಷೆ ಪ್ರಗತಿಯಲ್ಲಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 668 ಲಸಿಕಾ ಕೇಂದ್ರ ತೆರೆಯಲಾಗುವುದು. ಜತೆಯಲ್ಲಿ 18 ಟ್ರಾನ್ಸಿಟ್​ ಬೂತ್​, 5 ಮೊಬೈಲ್​ ಟೀಮ್​, 1,363 ತಂಡ ಹಾಗೂ 155 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಲಸಿಕಾ ದಿನದಂದು ಲಸಿಕೆ ನೀಡಲು ಗುರುತಿಸಲಾದ ಅಂಗನವಾಡಿ ಹಾಗೂ ಶಾಲೆಗಳಲ್ಲಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಬೇಕು. ರವಿವಾರ ಆಗಿರುವುದರಿಂದ ರೈಲ್ವೆ ನಿಲ್ದಾಣ, ಎನ್​ಎಚ್​ ಟೋಲ್​ ಗೇಟ್​ಗಳಲ್ಲಿ ಬೂತ್​ ತೆರೆಯಬೇಕು. ಎಲ್ಲ ಇಲಾಖಾ ಅಧಿಕಾರಿಗಳೂ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಡಿಸಿ ತಿಳಿಸಿದರು.
"

ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಗರ್ಭಕಂಠ ಕ್ಯಾನ್ಸರ್​ನಿಂದ ರಕ್ಷಣೆ ಪಡೆಯಲು 14 ವರ್ಷ ಮೇಲ್ಪಟ್ಟ ಹಾಗೂ 15 ವರ್ಷದೊಳಗಿನ ಹೆಣ್ಣು ಮಕ್ಕಳು ಎಚ್​ಪಿವಿ ಲಸಿಕೆ ಪಡೆಯಬೇಕು. ಅದಕ್ಕಾಗಿ ಪೋಸ್ಟರ್​, ಜಾಗೃತಿ ಕಾರ್ಯಕ್ರಮ ಏರ್ಪಡಿಸಬೇಕು. ಪಾಲಕರಿಗೆ ಲಸಿಕೆಯ ಸುರಕ್ಷತೆ ಕುರಿತು ಮನದಟ್ಟು ಮಾಡಿಸಬೇಕು.

— ಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ.