ಪಡುಬಿದ್ರಿ: ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ 6 ತಿಂಗಳಿನಿಂದ ಮಾಸಾಶನ ಬಂದಿಲ್ಲವೆನ್ನುವ ದೂರು ಬಂದಿವೆ. ವೃದ್ಧಾಪ್ಯ ವೇತನ ಹಾಗೂ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮನೆಗಳಿಗೆ ತೆರಳಿ ಸರ್ವೇ ನಡೆಯುತ್ತಿದೆ. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಒಂದೆರಡು ತಿಂಗಳಿನಲ್ಲಿ ಅರ್ಹ ಫಲಾನುಭವಿಗಳಿಗೆ ಕೊಡಿಸುವ ಭರವಸೆ ಸರ್ಕಾರದಿಂದ ಸಿಕ್ಕಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಕಾಪು ತಾಲೂಕು ಆಡಳಿತ ನೇತೃತ್ವದಲ್ಲಿ ಮುದರಂಗಡಿ ಗ್ರಾಪಂ ವ್ಯಾಪ್ತಿಯ ವಿದ್ಯಾನಗರ ದುರ್ಗಾ ಮಂದಿರದಲ್ಲಿ ಶನಿವಾರ ಪ್ರಜಾಸೇವಾ ಆಂದೋಲನ ಸಭೆ ಉದ್ಘಾಟಿಸಿ, ಮಾತನಾಡಿದರು.
ಕಾಪು ಕ್ಷೇತ್ರದಲ್ಲಿ 9 ಸಾವಿರ ನಿವೇಶನಕ್ಕೆ ಬೇಡಿಕೆ ಇದೆ. ನಿವೇಶನ ಗುರುತಿಸುವಿಕೆ ಕಾರ್ಯ ತ್ವರಿತವಾಗಿ ಮಾಡಿ ಅರ್ಹ ಫಲಾನುಭವಿಗಳಿಗೆ ನೀಡುವಲ್ಲಿ ಅಧಿಕಾರಿಗಳು ಪ್ರಯತ್ನಿಸಬೇಕು. ಪ್ರಜಾಸೇವೆ ಸಭೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳಿಗೆ 21 ದಿನಗಳಲ್ಲಿ ಪರಿಹಾರ ಹುಡುಕಿ ಪರಿಹರಿಸಬೇಕು, ಇಲ್ಲವಾದಲ್ಲಿ ಹಿಂಬರಹ ನೀಡಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಅನಂತಶಂಕರ ಬಿ. ಮಾತನಾಡಿದರು. ಕಾರ್ಕಳ ವಿಭಾಗದ ಎಎಸ್ಪಿ ಇಶಿಕಾ ಗುಪ್ತಾ, ಶಿಕ್ಷಣ ಇಲಾಖೆಯ ಯಲ್ಲಮ್ಮ, ಮುದರಂಗಡಿ ಗ್ರಾಪಂ ಆಡಳಿತಾಧಿಕಾರಿ ಅರುಣ್ ಬಿ., ಪಿಡಿಒ ಶ್ರೀವಿದ್ಯಾ ಉಪಸ್ಥಿತರಿದ್ದರು. ಗ್ರಾಮ ಆಡಳಿತಾಧಿಕಾರಿ ಶ್ರೀನಿವಾಸ್ ವಂದಿಸಿದರು.
ಮೂಡುಬೆಳ್ಳೆ ಗ್ರಾಪಂ ವ್ಯಾಪ್ತಿಯಲ್ಲಿ ಜೆಜೆಎಂ ಕುಡಿಯುವ ನೀರಿನ ಸರಬರಾಜಿಗೆ ಓವರ್ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದಿರುವ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಶಾಸಕರು ತಹಸೀಲ್ದಾರ್ಗೆ ಸೂಚಿಸಿದರು. ಸ್ಥಗಿತಗೊಂಡಿರುವ ಉಡುಪಿ, ಮೂಡುಬೆಳ್ಳೆ ಹಾಗೂ ಪಡುಬಿದ್ರಿ-ಕಾರ್ಕಳ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕಿರುವ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಭೆಯಲ್ಲಿ 44 ಅರ್ಜಿಗಳು ಸಲ್ಲಿಕೆಯಾಗಿದ್ದು, ಪ್ರಮುಖವಾಗಿ ನಿವೇಶನ, ಚಿರತೆ ಕಾಟ, ಕುಡಿಯುವ ನೀರು, ದಾರಿದೀಪ, ರಸ್ತೆ, ಸಾಮಾಜಿಕ ಭದ್ರತಾ ಯೋಜನೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಸಂಬಂಧಿಸಿ ಸಾರ್ವಜನಿಕರಿಂದ ಅಹವಾಲು ಸಲ್ಲಿಕೆಯಾಯಿತು.