ನಾಗರಮಠ ಪರಿಸರದಲ್ಲಿ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. 
ಉಡುಪಿ

ನಾಗರಮಠದಲ್ಲಿ ಮರಳು ದಂಧೆ ವಿರುದ್ಧ ಜನಾಕ್ರೋಶ

ಕೋಟ: ತಾಲೂಕಿನ ಹೊಸಹಾಳ ಗ್ರಾಮದ ನಾಗರಮಠ ಅಣೆಕಟ್ಟು ಪರಿಸರದಲ್ಲಿ ಜಿಲ್ಲಾಡಳಿತ ಹಾಗೂ ಗಣಿ ಇಲಾಖೆ ವತಿಯಿಂದ ನಡೆಯುತ್ತಿರುವ ಅವೈಜ್ಞಾನಿಕ ಮರಳುಗಾರಿಕೆ ವಿರೋಧಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಮೂರು ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಸ್ಥಳೀಯ ಮುಖಂಡ ಚಂದ್ರ ಕಾಂಚನ್ ಮಾತನಾಡಿ, ಈ ಹಿಂದೆಯೂ ಇಲ್ಲಿ ಮರಳುಗಾರಿಕೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ. ಆದರೂ ನಿಯಮಬಾಹಿರವಾಗಿ ಮರಳುಗಾರಿಕೆಗೆ ಮರು ಪರವಾನಗಿ ನೀಡಲಾಗಿದೆ. 1,13,000 ಮೆಟ್ರಿಕ್ ಟನ್ ಮರಳು ತೆಗೆಯಲು ಅನುಮತಿ ನೀಡಿರುವುದು ಈ ಭಾಗದ ಪರಿಸರಕ್ಕೆ ಮಾರಕವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮರಳು ತುಂಬಿದ ಲಾರಿಗಳು ಓಡಾಟದಿಂದ ತೊಂದರೆಯಾಗುತ್ತಿದೆ. ನ್ಯಾಯ ಕೇಳಲು ಹೋದ ಗ್ರಾಮಸ್ಥರ ಮೇಲೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ, ಎಫ್‌ಐಆರ್ ಮೂಲಕ ಹೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಜಿಲ್ಲಾಧಿಕಾರಿಗಳು ಮತ್ತು ಎಸ್.ಪಿ ಸ್ಥಳಕ್ಕೆ ಭೇಟಿ ನೀಡಿ ನಮಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ರಸ್ತೆಯಲ್ಲೇ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧ ಎಂದು ಪ್ರತಿಭಟನಕಾರರು ಎಚ್ಚರಿಸಿದ್ದಾರೆ. ಸ್ಥಳೀಯರಾದ ಆಶಾ, ಗಣೇಶ್ ಮತ್ತಿತರರಿದ್ದರು.