ಪರೀಕ್ಷೆಯ ಅಧ್ಯಯನಕ್ಕಾಗಿ ನಿರಂತರ ವಿದ್ಯುತ್ ಒದಗಿಸುವಂತೆ ಸಿಎಮ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ 2025ರ ನವೆಂಬರ್ನಲ್ಲಿ 'ಹೊಯ್ಸಳ ಶೌರ್ಯ ಪ್ರಶಸ್ತಿ' ಪುರಸ್ಕೃತ ವಿದ್ಯಾರ್ಥಿ ಉಡುಪಿಯ ದೀಪೇಶ್ ದೀಪಕ್ ಶೆಣೈ.
* ಸಿಎಂಗೆ ಎಸ್ಎಸ್ಎಲ್ಸಿ ವಿದ್ಯಾರ್ಥಿ ದೀಪೇಶ್ ಶೆಣೈ ಪತ್ರ
ಉಡುಪಿ: ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದು ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನಿರಂತರ ವಿದ್ಯುತ್ ಸರಬರಾಜು ಮಾಡಬೇಕೆಂದು ಒತ್ತಾಯಿಸಿ 2025ರ ನವೆಂಬರ್ನಲ್ಲಿ 'ಹೊಯ್ಸಳ ಶೌರ್ಯ ಪ್ರಶಸ್ತಿ' ಪುರಸ್ಕೃತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾನೆ.
ಉಡುಪಿಯ ಕುಂಜಿಬೆಟ್ಟುನಲ್ಲಿರುವ ಟಿ.ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನ 10ನೇ ತರಗತಿ ವಿದ್ಯಾರ್ಥಿಯಾಗಿರುವ ದೀಪೇಶ್, ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ. ಆದರೆ, ಉಡುಪಿಯಲ್ಲಿ ಅನಿಯಮಿತ ಹಾಗೂ ಅಘೋಷಿತ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ದಿನದಲ್ಲಿ ಹಲವಾರು ಬಾರಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಅಭ್ಯಾಸಕ್ಕೆ ತೊಡಕಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾನೆ.
ರಾಜ್ಯದ ಸಮಸ್ತ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಮುಂಜಾನೆ ಮತ್ತು ರಾತ್ರಿ ಸಮಯದಲ್ಲಿ ನಿರಂತರ ವಿದ್ಯುತ್ ಒದಗಿಸಬೇಕು. ಪದೇಪದೇ ವಿದ್ಯುತ್ ಕೈಕೊಡುವುದರಿಂದ ಅಧ್ಯಯನ ಸಮಯವೂ ಕಡಿತ ಆಗುತ್ತಿದೆ. ಆನ್ಲೈನ್ ಅಧ್ಯಯನ, ಡಿಜಿಟಲ್ ಶೈಕ್ಷಣಿಕ ಸಂಪನ್ಮೂಲ ಹಾಗೂ ಸಾಧನಗಳ ಚಾರ್ಜಿಂಗ್ಗೆ ತೊಂದರೆ ಆಗುತ್ತಿದೆ ಎಂದು ಉಲ್ಲೇಖಿಸಿದ್ದಾನೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 'ಶಿಕ್ಷಣವು ಮುಕ್ತಿಗೊಳಿಸುವ ಶಕ್ತಿ' ಎಂಬ ಮಾತನ್ನೂ ಉಲ್ಲೇಖಿಸಿದ್ದಾನೆ. ಈ ಮನವಿ ಯಾವುದೇ ವೈಯಕ್ತಿಕ ಲಾಭ ಅಥವಾ ಪ್ರಚಾರಕ್ಕಾಗಿ ಅಲ್ಲ. ಸಂಪೂರ್ಣವಾಗಿ ವಿದ್ಯಾರ್ಥಿ ಸಮುದಾಯದ ಹಿತದೃಷ್ಟಿಯಿಂದ ಈ ಮನವಿ ಸಲ್ಲಿಸಲಾಗಿದೆ. ತಾವು ನಿರಂತರ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳುತ್ತೀರಿ ಎಂಬ ವಿಶ್ವಾಸ, ಭರವಸೆಯೂ ಇದೆ ಎಂದು ದೀಪೇಶ್ ಸ್ಪಷ್ಟಪಡಿಸಿದ್ದಾನೆ.