ಉಡುಪಿ: ಎಲ್ಲ ಗ್ರಾಪಂ ಕಚೇರಿ, ಸರ್ಕಾರಿ ಶಾಲೆ, ಅಂಗನವಾಡಿ ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳು ವಿಶ್ವಾಸಾರ್ಹ ಡಿಜಿಟಲ್ ಸಂಪರ್ಕ ಹೊಂದಿರಬೇಕು. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ವೇಗದ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸುವ ಭಾರತ್ ನೆಟ್ ಹಂತ-3ರ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಗ್ರಾಹಕರಿಗೆ ಗುಣಮಟ್ಟದ ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ಮುತುವರ್ಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಉಡುಪಿ ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಉಡುಪಿಯ ಜಿಪಂ ಕಚೇರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತ್ ನೆಟ್ ಹಂತ-3ರ ಪುನರ್ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಹಳ್ಳಿಗಳಿಗೂ ಆಪ್ಟಿಕಲ್ ಸಂಪರ್ಕ
ಭಾರತ್ ನೆಟ್ ಯೋಜನೆಯ 2 ಹಂತಗಳನ್ನು ಈಗಾಗಲೇ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಎಲ್ಲ ಗ್ರಾಮಗಳಿಗೆ ನಿರಂತರ, ವಿಶ್ವಾಸಾರ್ಹ ಹಾಗೂ ಅಡಚಣೆ ರಹಿತ ಸೇವೆ ನೀಡಬೇಕಿದ್ದರಿಂದ ಭಾರತ ಸರ್ಕಾರವು 3ನೇ ಹಂತದಲ್ಲಿ ಅಮೆಂಡೆಡ್ ಭಾರತ್ನೆಟ್ ಪ್ರೋಗ್ರಾಂ ಜಾರಿಗೆ ತಂದಿದೆ. ಹಳ್ಳಿಗಳಿಗೂ ಆಪ್ಟಿಕಲ್ ಫೈಬರ್ ಸಂಪರ್ಕ ವಿಸ್ತರಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಡಿ ರಾಜ್ಯದಲ್ಲಿ ಪಾಲಿಕ್ಯಾಬ್ ಇಂಡಿಯಾ ಲಿಮಿಟೆಡ್ ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಪ್ರತಿ ಮನೆಗೂ ನೀಡಿ ಸಂಪರ್ಕ
ಜಿಪಂ ಸಿಇಒ ಪ್ರತೀಕ ಬಾಯಲ್ ಮಾತನಾಡಿ, ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿ ಜನರಿಗೆ ತಲುಪಬೇಕು. ದೇಶದಲ್ಲಿ 3.5 ಲಕ್ಷ ಗ್ರಾಪಂಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಕೊಡುವುದು ಸರ್ಕಾರದ ಧ್ಯೇಯವಾಗಿದೆ. ಗ್ರಾಪಂಗಳಿಂದ ಪ್ರತಿ ಮನೆಗೂ ಸಂಪರ್ಕ ಕಲ್ಪಿಸುವ ಜವಾಬ್ದಾರಿ ಬಿಎಸ್ಎನ್ಎಲ್ ಸಂಸ್ಥೆಯ ಅಧಿಕಾರಿಗಳ ಮೇಲಿದೆ ಎಂದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೊಳ್ಳಿ, ಬಿಎಸ್ಎನ್ಎಲ್ ಕರ್ನಾಟಕದ ಭಾರತ್ನೆಟ್ ವಿಭಾಗದ ಜನರಲ್ ಮ್ಯಾನೇಜರ್ ಬಿ.ಎಸ್. ನಾಗರ್, ಮಂಗಳೂರಿನ ಜನರಲ್ ಮ್ಯಾನೇಜರ್ ಹೇಮಂತ, ಎಜೆಎಂ ರಾಜಶೇಖರ, ಬಿಎಸ್ಎನ್ಎಲ್ನ ಅಧಿಕಾರಿಗಳು, ಫ್ರಾಂಚೈಸಿಯ ಪ್ರಮುಖರು ಉಪಸ್ಥಿತರಿದ್ದರು.
ಭಾರತ್ ನೆಟ್ನವರು ಮನೆ, ಶೈಕ್ಷಣಿಕ ಸಂಸ್ಥೆ ಹಾಗೂ ಸರ್ಕಾರಿ ಇಲಾಖೆಗಳಿಗೆ ನೀಡಿದ ಸಂಪರ್ಕಗಳನ್ನು ಸರಿಯಾಗಿ ನಿರ್ವಹಿಸಬೇಕು. ಸೇವೆಯಲ್ಲಿ ವ್ಯತ್ಯಾಸ ಅಥವಾ ತೊಂದರೆಯಾದರೆ ಜನರು ಖಾಸಗಿ ಸಂಸ್ಥೆಗಳ ಮೊರೆ ಹೋಗುತ್ತಾರೆ. ಹೀಗಾಗದಂತೆ ಎಚ್ಚರ ವಹಿಸಬೇಕು. ಎಲ್ಲ ಪಿಡಿಒಗಳು ಬಿಎಸ್ಎನ್ಎಲ್ ಇಂಟರ್ನೆಟ್ ಬಗ್ಗೆ ಪ್ರತಿ ಮನೆಗೆ ಕರಪತ್ರ ಹಂಚಿ ಅರಿವು ಮೂಡಿಸಬೇಕು. ಭಾರತ್ ನೆಟ್ನ ಫ್ರಾಂಚೈಸಿಯಾಗಲು ಯುವಕರಿಗೆ ಅವಕಾಶ ಮಾಡಿಕೊಡಬೇಕು.ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.