ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ನೀತಿ ಖಂಡಿಸಿ ಎಸ್‌ಡಿಪಿಐ ಶುಕ್ರವಾರ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿತು. ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಅಡ್ಡೂರು, ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾ ಕೋಶಾಧಿಕಾರಿ ಯಾಸಿನ್ ಅರ್ಕುಳ ಮೊದಲಾದವರಿದ್ದರು.
ಗುರುಪುರ: ರಾಜ್ಯ ಸರ್ಕಾರ ಕೈಗೊಂಡಿರುವ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ನೀತಿ ಖಂಡಿಸಿ ಎಸ್‌ಡಿಪಿಐ ಶುಕ್ರವಾರ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನುದ್ದೇಶಿಸಿ ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಅಡ್ಡೂರು ಮಾತನಾಡಿ, ಜಿಲ್ಲೆಯ 4 ತಾಲೂಕು ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ಸುಪರ್ದಿಗೆ ನೀಡುವ ಬದಲಾಗಿ, ಸರ್ಕಾರಿ ಆಸ್ಪತ್ರೆಗಳಿಗೆ ತಜ್ಞ ವೈದ್ಯರು ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಿ ಉತ್ತಮ ಆರೋಗ್ಯ ಸೇವೆಗಳೊಂದಿಗೆ ಮೇಲ್ದರ್ಜೆಗೇರಿಸಬೇಕು. ಸಾರ್ವಜನಿಕ ಆಸ್ಪತ್ರೆ ಬಲಪಡಿಸುವಲ್ಲಿ ಸರ್ಕಾರ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಜನಸಾಮಾನ್ಯರ ಆರೋಗ್ಯ ಸೇವೆ ಯಾವತ್ತೂ ವ್ಯಾಪಾರೀಕರಣವಾಗಬಾರದು. ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದ.ಕ ಸಹಿತ 8 ಜಿಲ್ಲೆಗಳಿಂದ ರೋಗಿಗಳು ಬರುತ್ತಿದ್ದಾರೆ. ಹಾಗಾಗಿ ಈ ಆಸ್ಪತ್ರೆವನ್ನು ಪ್ರಾದೇಶಿಕ ಮಟ್ಟದಲ್ಲಿ ಮೇಲ್ದರ್ಜೆಗೇರಿಸಿ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದರು.
ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾ ಕೋಶಾಧಿಕಾರಿ ಯಾಸಿನ್ ಅರ್ಕುಳ ಮಾತನಾಡಿ, ಆರೋಗ್ಯ ಸೇವೆ ಜನರ ಮೂಲ ಹಕ್ಕಾಗಿದ್ದು, ಅದನ್ನು ವ್ಯಾಪಾರವಾಗಿ ಪರಿವರ್ತಿಸುವುದು ಖಂಡನೀಯ. ಸರ್ಕಾರ ಖಾಸಗಿ ಲಾಬಿಗಳಿಗೆ ಮಣಿಯದೆ ಬಡ ಮತ್ತು ಮಧ್ಯಮ ವರ್ಗದ ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಖಾಸಗೀಕರಣದ ವಿರುದ್ಧ ಪಕ್ಷ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು. ಪಕ್ಷದ ಪ್ರಾದೇಶಿಕ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಮುಖಂಡರು ಇದ್ದರು.