ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಗುಣಮಟ್ಟದ ಔಷಧ ವಿತರಣೆ ಹಾಗೂ ಖಾಸಗೀಕರಣ ವಿರೋಧಿಸಿ ಪ್ರತಿಭಟಿಸಿದ ವಿವಿಧ ಸಂಘಟನೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅವರಿಗೆ ಮನವಿ ಸಲ್ಲಿಸಿದರು. ಸುಶೀಲಾ ನಾಡ, ಸುಂದರ್ ಮಾಸ್ಟರ್, ಕೆ.ಪುತ್ರ, ಶ್ಯಾಮರಾಜ ಬಿರ್ತಿ, ಫಣಿರಾಜ್, ಪ್ರೀತಿ ಇತರರಿದ್ದರು.
* ಕೊರಗ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಆಗ್ರಹ
* ವಿವಿಧ ಸಂಟನೆಗಳಿಂದ 'ಆರೋಗ್ಯ ಹಕ್ಕು' ಪ್ರತಿಭಟನೆ
ಉಡುಪಿ: ರಾಜ್ಯದ ಎಲ್ಲ ಜಿಲ್ಲಾ, ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡಜನರಿಗೆ ಎಲ್ಲ ರೀತಿಯ ಚಿಕಿತ್ಸೆಗಳೂ ಉಚಿತವಾಗಿ ಸಿಗಬೇಕು. ಕಾಯಿಲೆ ವಾಸಿಯಾಗಲು ಗುಣಮಟ್ಟದ ಔಷಧ ಲಭಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ಚೀಟಿ ಬರೆಯುವ ಸಂಪ್ರದಾಯಕ್ಕೆ ಕಡಿವಾಣ ಹಾಕಬೇಕು. ಉತ್ತಮ ಆರೋಗ್ಯ ಸೇವೆಯ ನೆಪದಲ್ಲಿ ಸರ್ಕಾರಿ ಆಸ್ಪತ್ರೆಗಳ ಖಾಸಗೀರಣವನ್ನು ರಾಜ್ಯ ಸರ್ಕಾರ ಸಂಪೂರ್ಣ ಕೈಬಿಡಬೇಕು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ ಜಿಲ್ಲಾಧ್ಯಕ್ಷೆ ಸುಶೀಲಾ ನಾಡ ಆಗ್ರಹಿಸಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಸಹಭಾಗಿತ್ವ (ಪಿಪಿಪಿ) ವಿರೋಧಿಸಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ (ಫೆ.10) ಆಯೋಜಿಸಿದ್ದ 'ಆರೋಗ್ಯ ಹಕ್ಕು ಜಾಥಾ' ಪ್ರತಿಭಟನೆಯಲ್ಲಿ ಮಾತನಾಡಿದರು.
ಆರೋಗ್ಯ ಗ್ಯಾರಂಟಿ ನೀಡಿ
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್ ಮಾತನಾಡಿ, ರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಸೂಕ್ತ ಆರೋಗ್ಯ ಸೌಕರ್ಯ ಲಭಿಸುತ್ತಿಲ್ಲ. ಸ್ಕ್ಯಾನಿಂಗ್, ಎಕ್ಸರೇ ಯಂತ್ರಗಳು ಕೆಟ್ಟಿದೆ ಎಂದು ಖಾಸಗಿಯವರಿಗೆ ಚೀಟಿ ಬರೆದುಕೊಡುತ್ತಾರೆ. ಬಡಜನರಿಗೆ ದುಬಾರಿ ಹಣ ತೆತ್ತು ಖಾಸಗಿ ಆಸ್ಪತ್ರೆಗೆ ಹೋಗಲು ಸಾಧ್ಯವೇ? ಸಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರು, ಸಿಬ್ಬಂದಿಯಿಲ್ಲ. ಕಾಯಿಲೆ ವಾಸಿ ಮಾಡಲಾಗದ, ಜನರ ಜೀವ ರಸಲಾಗದ ನಿಮ್ಮ ಪಂಚ ಗ್ಯಾರಂಟಿ ಯೋಜನೆ ಇದ್ದು ಏನು ಪ್ರಯೋಜನ? ಕರ್ನಾಟಕದಲ್ಲಿ 'ಆರೋಗ್ಯ ಹಕ್ಕು ಕಾಯಿದೆ' ಜಾರಿಗೊಳಿಸಿ. ಅದಕ್ಕಾಗಿ 6ನೇ ಗ್ಯಾರಂಟಿಯಾಗಿ 'ಆರೋಗ್ಯ ಗ್ಯಾರಂಟಿ' ನೀಡಿ ಎಂದು ಆಗ್ರಹಿಸಿದರು.
ಮೆರವಣಿಗೆ, ಮನವಿ
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಹಾಗೂ ಗುಣಮಟ್ಟದ ಔಷಧ ಲಭಿಸುವಂತಾಗಬೇಕೆಂದು ಆಗ್ರಹಿಸಿ ಮಣಿಪಾಲದ ಟೈಗರ್ ಸರ್ಕಲ್ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ವಿವಿಧ ಸಂಘಟನೆಗಳ ಸದಸ್ಯರು 'ಆರೋಗ್ಯ ಹಕ್ಕು ಜಾಥಾ' ನಡೆಸಿದರು. ಡಿಸಿ ಕಚೇರಿಯಲ್ಲಿ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ತಮ್ಮ ಪ್ರತಿಭಟನೆ ಹಾಗೂ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ ಬಿರ್ತಿ, ಸಹಬಾಳ್ವೆ ಸಂಘಟನೆಯ ಅಧ್ಯಕ್ಷ ಣಿರಾಜ್, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಂಯೋಜಕ ಕೆ.ಪುತ್ರ, ಕಾರ್ಯದರ್ಶಿ ಪ್ರೀತಿ, ಖಜಾಂಚಿ ವಿನಯ್ ಅಡ್ವೆ, ಬೊಗ್ರ ಕೊಕ್ಕರ್ಣೆ, ಶೀನ ಬೆಳ್ಮಣ್ ಇತರರು ಉಪಸ್ಥಿತರಿದ್ದರು.
ಔಷಧ ನಿಗಮದಲ್ಲಿ ಭ್ರಷ್ಟಾಚಾರ
ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ಔಷಧ ಪೂರೈಸಲು ಸರ್ಕಾರವು 2003ರಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿ. (ಕೆಎಸ್ಎಂಎಸ್ಸಿಎಲ್) ಸ್ಥಾಪಿಸಿದೆ. ಇದು ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ಔಷಧ ಪೂರೈಸಲು ವಿವಿಧ ಕಂಪನಿಗಳಿಂದ ಔಷಧ ಖರೀದಿಸುತ್ತಿದ್ದು, ವ್ಯವಹಾರ ಪಾರದರ್ಶಕವಾಗಿಲ್ಲ. ಭ್ರಷ್ಟಾಚಾರದಿಂದ ಕೂಡಿದೆ. ಈ ವಿಚಾರವಾಗಿ ಅನೇಕ ಬಾರಿ ನಮ್ಮ ಸಂಫಟನೆಯಿಂದ ಆರೋಗ್ಯ ಸಚಿವರನ್ನು ಭೇಟಿಯಾಗಿ ತಿಳಿಸಿದ್ದರೂ ಪ್ರಯೋಜವಾಗಿಲ್ಲ. ಸದನದಲ್ಲಿ ರಾಜಕೀಯಕ್ಕಾಗಿ ಮಾತ್ರ ಆಸ್ಪತ್ರೆಗಳಲ್ಲಿ ಉಚಿತ ಔಷಧ ಲಭಿಸಬೇಕು ಎನ್ನುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿಯವರಿಗೆ ಅವಕಾಶ ನೀಡಬೇಡಿ. ತಮಿಳುನಾಡು, ಕೇರಳ, ರಾಜಸ್ಥಾನ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಬಡಜನರಿಗೆ ಉಚಿತ ಚಿಕಿತ್ಸೆ ನೀಡಿ ಎಂದು ಸುಶೀಲಾ ನಾಡ ಒತ್ತಾಯಿಸಿದರು.
ತೀವ್ರ ಹೋರಾಟದ ಎಚ್ಚರಿಕೆ
ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಲಾಬಿ ಇರಬಾರದು. ಆದರೆ, ಕೇಂದ್ರ ನೀತಿ ಆಯೋಗದ ಶಿಫಾರಸಿನಂತೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆ ನಡೆಸುತ್ತಿರುವುದು ನಿಜಕ್ಕೂ ದುರ್ದೈವದ ಸಂಗತಿ. ತುಮಕೂರು, ವಿಜಯನಗರ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ ಮತ್ತು ದಾವಣೆಗೆರೆ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿದೆ. ಕೂಡಲೇ ಇದನ್ನು ಕೈಬಿಡಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.