ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಕಾರ್ಮಿಕರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಖಂಡಿಸಿ ಉಡುಪಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟಿಸಿದರು. ಪ್ರೊ.ಫಣಿರಾಜ್​, ಸುಂದರ್​ ಮಾಸ್ಟರ್​, ಕವಿರಾಜ್​ ಕಾಂಚನ್​, ಇದ್ರೀಸ್​ ಹೂಡೆ, ಸುರೇಶ್​ ಕಲ್ಲಾಗರ ಮಂಜುನಾಥ್​ ಗಿಳಿಯಾರ್​, ಶಶಿಧರ್​ ಗೊಲ್ಲ ಇತರರಿದ್ದರು. 
ಉಡುಪಿ

ಮಲ್ಪೆ ಬಂದರಿನಲ್ಲಿ ಸ್ಥಾಪಿಸಿ ಪೊಲೀಸ್​ ಔಟ್​ ಪೋಸ್ಟ್​

* ಸಹಬಾಳ್ವೆ ಸಂಘಟನೆ ಸಂಚಾಲಕ ಪ್ರೊ.ಫಣಿರಾಜ್​ ಆಗ್ರಹ 

* ಕಾರ್ಮಿಕರ ಮೇಲಿನ ಹಲ್ಲೆ ಖಂಡಿಸಿ ವಿವಿಧ ಸಂಘಟನೆ ಪ್ರತಿಭಟನೆ

ಉಡುಪಿ: ಮಲ್ಪೆ ಬಂದರಿನಲ್ಲಿ ಕೆಲಸ ಮಾಡುವ ಶ್ರಮಿಕರ ಮೇಲೆ ದೌರ್ಜನ್ಯ ಹೆಚ್ಚತೊಡಗಿದೆ. ಜಾತಿ, ಮತ, ಧರ್ಮದ ಹೆಸರಿನಲ್ಲಿ ಅವರನ್ನು ಒಡೆಯಲಾಗುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ರಾಜಕಾರಣಿಗಳು, ಸಂಘಟನೆಯ ಹಿತಾಸಕ್ತಿಯುಳ್ಳವರು ತಮ್ಮ 'ಫ್ಯಾಸಿಸ್ಟ್​ ಪೊಲಿಟಿಕಲ್​'ಗಾಗಿ ನಿರಂತರವಾಗಿ ಬಂದರು ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರ ಕಣ್ಮುಚ್ಚಿ ಕುಳಿತುಕೊಳ್ಳದೆ ಬಂದರು ಪ್ರದೇಶದಲ್ಲಿ ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್​ ಔಟ್​ ಪೋಸ್ಟ್​ ಸ್ಥಾಪಿಸಬೇಕು ಎಂದು ಸಹಬಾಳ್ವೆ ಸಂಘಟನೆಯ ಸಂಚಾಲಕ ಪ್ರೊ.ಫಣಿರಾಜ್​ ಆಗ್ರಹಿಸಿದರು.
ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಕಾರ್ಮಿಕರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ದಬ್ಬಾಳಿಕೆ, ದೌರ್ಜನ್ಯ ಖಂಡಿಸಿ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಸಿಐಟಿಯು, ದಸಂಸ ಅಂಬೇಡ್ಕರ್​ ವಾದ, ಸಹಬಾಳ್ವೆ ಸಂಘಟನೆ ಹಾಗೂ ಸಮಾನ ಮನಸ್ಕರ ವತಿಯಿಂದ ಬುಧವಾರ (ಮಾ.4) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕಾರ್ಮಿಕರಲ್ಲಿ ನಿತ್ಯ ಆತಂಕ

ದಸಂಸ ಅಂಬೇಡ್ಕರ್​ ವಾದ ರಾಜ್ಯ ಸಂಚಾಲಕ ಸುಂದರ್​ ಮಾಸ್ಟರ್​ ಮಾತನಾಡಿ, ಮಲ್ಪೆ ಬಂದರಿನಲ್ಲಿರುವ ಶ್ರಮಿಕರ ನೋವಿಗೆ ನಾವು ಗಟ್ಟಿ ಧ್ವನಿಯಾಗಬೇಕು. ನಿರಂತರ ಹಲ್ಲೆ, ದೌರ್ಜನ್ಯದಿಂದ ಕಾರ್ಮಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಪಾಳೇಗಾರಿಕೆ ಮನಸ್ಥಿತಿಯವರಿಂದಾಗಿ ಆ ಪ್ರದೇಶದಲ್ಲಿ ಕಾನೂನಿಗೆ ಬೆಲೆ ಇಲ್ಲದಂತಾಗಿದೆ. ಈ ವಿಚಾರವಾಗಿ ಮಲ್ಪೆಯಲ್ಲೇ ಪ್ರತಿಭಟಿಸಬೇಕಿದೆ ಎಂದರು.
ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ಕಾರ್ಯದರ್ಶಿ ಕವಿರಾಜ್​ ಎಸ್​. ಕಾಂಚನ್​, ಸಹಬಾಳ್ವೆ ಸಂಘಟನೆಯ ಮುಖಂಡ ಇದ್ರೀಸ್​ ಹೂಡೆ, ಸಿಪಿಎಂ ಮುಖಂಡ ಸುರೇಶ್​ ಕಲ್ಲಾಗರ ಮಾತನಾಡಿದರು.
ಮಂಜುನಾಥ್​ ಗಿಳಿಯಾರ್​, ಶ್ಯಾಮ್​ ರಾಜ್​ ರ್ಬಿತಿ, ಮಂಜುನಾಥ್​ ಬಾಳ್ಕುದ್ರು, ಫಾ.ವಿಲಿಯಂ ಮಾರ್ಟೀಸ್​, ಹುಸೇನ್​ ಕೋಡಿಬೆಂಗ್ರೆ, ಅಝೀಜ್​ ಉದ್ಯಾವರ, ಶಶಿಧರ್​ ಗೊಲ್ಲ, ಚಂದ್ರಶೇಖರ್​, ಎಚ್​.ನರಸಿಂಹ, ಕೆ.ಶಂಕರ್​, ವಾಮನ್​ ಪೂಜಾರಿ, ಚಿಕ್ಕ ಮೊಗವೀರ, ಉಮೇಶ್​ ಕುಂದರ್​, ಮೋಹನ್​, ಬಲ್ಕೀಸ್​, ಶೀಲಾವತಿ, ವೆಂಕಟೇಶ್​ ಕೋಣಿ ಉಪಸ್ಥಿತರಿದ್ದರು.
"

ಮಲ್ಪೆ ಬಂದರಿನಲ್ಲಿ ಹಲ್ಲೆಗೊಳಗಾದ ಕಾರ್ಮಿಕ ಶೇಖ್​ ಅಯ್ಯೂಬ್​ ವಿರುದ್ಧ ದಾಖಲಿಸಿರುವ ಪ್ರಕರಣ ಹಿಂಪಡೆದು ಸರ್ಕಾರ ಕೂಡಲೇ ಪರಿಹಾರ ಧನ ನೀಡಬೇಕು. ಹಲ್ಲೆ ನಡೆಸಿದ ಮಿಥುನ್​ ಕರ್ಕೇರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮಹಿಳಾ ಕಾರ್ಮಿಕರಿಗೆ ವಿಶೇಷ ಭದ್ರತೆಯ ನಿಯಮಾವಳಿ ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅಲ್ಲಿ ಯಾವುದೇ ಘಟನೆ ನಡೆದರೂ ಪೊಲೀಸರು ತಕ್ಷಣ ಮಧ್ಯ ಪ್ರವೇಶಿಸಿ ಕಾನೂನು ಕ್ರಮ ಕೈಗೊಳ್ಳಬೇಕು.