ಉಡುಪಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ ಯೋಜನೆಯ ಸೌಕರ್ಯ ಲಭಿಸುವಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳು ಸ್ವರೂಪಾ ಟಿ.ಕೆ. ಅವರಿಗೆ ಮನವಿ ನೀಡಿದರು. ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಅಭಿರಾಜ್ ಸುವರ್ಣ, ಪ್ರದೀಪ್ ಕುಂದರ್, ಗುರುರಾಜ್ ಮಾಡ, ಗಜೇಂದ್ರ ಎಸ್. ಬೆಳಮನೆ ಇತರರಿದ್ದರು.
* ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಡಿಸಿಗೆ ಮನವಿ
* ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸುವ ಎಚ್ಚರಿಕೆ
ಉಡುಪಿ: ದೇಶವಾಸಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ 'ಆಯುಷ್ಮಾನ್ ಭಾರತ' ಯೋಜನೆಯ ಪ್ರಯೋಜನ ಪಡೆಯಲು ಉಡುಪಿ ಜಿಲ್ಲೆಯಲ್ಲಿ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಕೆಲವು ಆಸ್ಪತ್ರೆಗಳಲ್ಲಿ ಈ ಸೌಲಭ್ಯ ನೀಡಲು ನಿರಾಕರಿಸಲಾಗುತ್ತಿದೆ. ವಾರದೊಳಗೆ ಈ ಯೋಜನೆಯ ಪ್ರಯೋಜನ ಲಭಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟಿಸುತ್ತೇವೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಎಚ್ಚರಿಕೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರನ್ನು ಕಚೇರಿಯಲ್ಲಿ ಸೋಮವಾರ (ಜೂ.29) ನಿಯೋಗದೊಂದಿಗೆ ಭೇಟಿಯಾಗಿ ಮನವಿ ಸಲ್ಲಿಸಿದರು. ಈ ವಿಚಾರವಾಗಿ ಈ ಹಿಂದೆಯೇ ತಾವು ಅಸ್ಪತ್ರೆಗಳಿಗೆ ಪತ್ರ ಬರೆದು ಸೌಲಭ್ಯ ನೀಡುವಂತೆ ಸೂಚಿಸಿದ್ದರೂ ಪ್ರಯೋಜನವಾಗಿಲ್ಲ. ವಾರದೊಳಗೆ ಈ ಸಮಸ್ಯೆ ಬಗೆಹರಿಯದಿದ್ದಲ್ಲಿ ಯುವ ಮೋರ್ಚಾ ವತಿಯಿಂದ ಅನಿವಾರ್ಯವಾಗಿ ಪ್ರತಿಭಟಿಸಬೇಕಾಗುತ್ತದೆ ಎಂದರು.
ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅಭಿರಾಜ್ ಸುವರ್ಣ, ಪ್ರದೀಪ್ ಕುಂದರ್, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಗುರುರಾಜ್ ಮಾಡ, ಗಜೇಂದ್ರ ಎಸ್. ಬೆಳಮನೆ, ಪ್ರಥ್ವಿರಾಜ್ ಮಣಿಪಾಲ, ಕಾರ್ಯದರ್ಶಿಗಳಾದ ರಾಕೇಶ್ ಅಮೀನ್ ಕಾರ್ಕಳ, ನಿತೇಶ್ ಶೆಟ್ಟಿ ಕಪ್ಪೆಟ್ಟು, ಯತೀಶ್ ಶೆಟ್ಟಿ, ಕಾರ್ಯಕಾರಿಣಿ ಸದಸ್ಯರಾದ ದರ್ಶಿತ್ ಶೆಟ್ಟಿ, ಗಣೇಶ್ ಕುಂದರ್, ನಿತೇಶ್, ಆದಿತ್ಯ ಆಚಾರ್ಯ, ಗ್ರಾಮಾಂತರ ಅಧ್ಯಕ್ಷ ಸುಶಾಂತ್ ಪೂಜಾರಿ, ಉಪಾಧ್ಯಕ್ಷ ಆಯುಷ್ ಪೂಜಾರಿ ಇತರರು ಉಪಸ್ಥಿತರಿದ್ದರು.