ಉಡುಪಿಯಲ್ಲಿ ನಗರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸುನೀಲಕುಮಾರ್ ಮಾತನಾಡಿದರು. ಯಶ್ಪಾಲ್ ಸುವರ್ಣ, ಉದಯಕುಮಾರ್ ಶೆಟ್ಟಿ, ನವೀನ್ಶೆಟ್ಟಿ, ಮಟ್ಟಾರು ರತ್ನಾಕರ್ ಹೆಗ್ಡೆ ಇತರರಿದ್ದರು.
ಉಡುಪಿ
ಸಾಲದ ಹೊರೆಯಿಂದ 'ಸಾಲರಾಮಯ್ಯ'ನಾದ ಸಿದ್ದರಾಮಯ್ಯ
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಟೀಕೆ
* ಉಡುಪಿ ನಗರ ಬಿಜೆಪಿಯಿಂದ ಪ್ರತಿಭಟನೆ
* ಬಜೆಟ್ನಲ್ಲಿ ಉಡುಪಿ ಜಿಲ್ಲೆಯ ಕಡೆಗಣನೆಗೆ ಖಂಡನೆ
ಉಡುಪಿ: ಅತಿಹೆಚ್ಚು ಬಜೆಟ್ ಮಂಡಿಸಿ ಖ್ಯಾತಿ ಗಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ಬಾರಿಯೂ ರಾಜ್ಯದ ಕರಾವಳಿಗೆ ಕರಾಳ ಬಜೆಟ್ ಮಂಡಿಸಿದ್ದಾರೆ. ಕಳೆದ ಮೂರು ಬಜೆಟ್ನಲ್ಲಿ ಉಡುಪಿ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆ ಆಗಿದ್ದು, ಅವರ ಗ್ಯಾರಂಟಿಗಾಗಿ ಸಾಲದ ಹೊರೆ ಹೆಚ್ಚುತ್ತಲೇ ಇದೆ. ಇಂದು ಜನಿಸುವ ಪ್ರತಿ ಮಗುವಿನ ತಲೆಯ ಮೇಲೆ 1.50 ಲಕ್ಷ ರೂ. ಸಾಲದ ಹೊರೆಯಿದೆ. ಸಿದ್ದರಾಮಯ್ಯ ಇದೀಗ 'ಸಾಲರಾಮಯ್ಯ' ಆಗಿದ್ದಾರೆ. ಇನ್ನೊಂದು ಜನ್ಮ ಎತ್ತಿ ಬಂದರೂ ಅವರಿಗೆ ಸಾಲ ತೀರಿಸಲು ಸಾಧ್ಯವಿಲ್ಲ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ನಲ್ಲಿ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಅನುದಾನ ನೀಡದಿರುವ ಕ್ರಮ ಖಂಡಿಸಿ ಉಡುಪಿ ನಗರ ಬಿಜೆಪಿ ಮಂಡಳದ ವತಿಯಿಂದ ಶನಿವಾರ (ಮಾ.14) ಸಂಜೆ ಉಡುಪಿಯ ಜಟ್ಕಾ ನಿಲ್ದಾಣದ ಸಮೀಪ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಮಸ್ಯೆಗೆ ಸ್ಪಂದಿಸದ ಸರ್ಕಾರ
ಮಾಜಿ ಸಚಿವ ಸುನೀಲಕುಮಾರ್ ಮಾತನಾಡಿ, ಅಭಿವೃದ್ಧಿಗೂ ನಮಗೂ ಯಾವುದೇ ಸಂಬಂಧ ಇಲ್ಲವೆಂಬಂತೆ ಸಿದ್ದರಾಮಯ್ಯ ಆಡಳಿತ ನಡೆಸುತ್ತಿದ್ದು ಇಡೀ ರಾಜ್ಯಕ್ಕೆ ಚೊಂಬು ನೀಡಿದ್ದಾರೆ. ಯಾವ ಯೋಜನೆಗೂ ಸ್ಪಷ್ಟತೆ ಇಲ್ಲ. 1.32 ಸಾವಿರ ಕೋಟಿ ರೂ. ಸಾಲ ಮಾಡಿದ್ದು, ಗ್ಯಾರಂಟಿಯೇ ಅಭಿವೃದ್ಧಿ ಎನ್ನುತ್ತ ಕಾಲಹರಣ ಮಾಡುತ್ತಿದ್ದಾರೆ. ಯಾವ ಯೋಜನೆಗೂ ಅನುದಾನ ಕೊಡುತ್ತಿಲ್ಲ. ಕಳೆದ ಮೂರು ವರ್ಷದಲ್ಲಿ ಒಂದೇಒಂದು ಸರ್ಕಾರಿ ಮನೆ ನೀಡಿಲ್ಲ. ಮನೆ ಕಟ್ಟುವವರಿಗೆ ಸರಿಯಾಗಿ ಮರಳು, ಕಲ್ಲು ಸಿಗುತ್ತಿಲ್ಲ. ಅವುಗಳ ದರವೂ ಹತ್ತುಪಟ್ಟು ಹೆಚ್ಚಾಗಿದೆ. ಯಾವುದೇ ಸಮಸ್ಯೆಗೂ ಸ್ಪಂದಿಸದ ಹಾಗೂ ಶಾಲೆಗೆ ಶೌಚಾಲಯ ಕಟ್ಟಲೂ ಹಣ ನೀಡದ ಕೆಟ್ಟ ಸರ್ಕಾರ ಇದು. ಇದೀಗ ಕುರ್ಚಿಗಾಗಿ ಅವರಲ್ಲೇ ಗುದ್ದಾಟ ಶುರುವಾಗಿದೆ. ಮುಂದಿನ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಯಲ್ಲಿ ಅವರ ದುರಾಡಳಿತವನ್ನು ಜನತೆಗೆ ತಿಳಿಸಬೇಕಿದೆ. ಅದಕ್ಕಾಗಿ ಬೈಂದೂರಿನಿಂದ ಸುಳ್ಯದವರೆಗೆ ಶೀಘ್ರದಲ್ಲೇ ಬೃಹತ್ ಪ್ರತಿಭಟನೆ ನಡೆಸೋಣ ಎಂದರು.
ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿದರು.
ಪ್ರತಿಭಟನೆಯಲ್ಲಿ ನಗರ ಅಧ್ಯಕ್ಷ ದಿನೇಶ್ ಅಮೀನ್, ಮಂಗಳೂರು ವಿಭಾಗ ನಿಕಟಪೂರ್ವ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ, ಪ್ರಮುಖ ಮುಖಂಡರಾದ ದಿನಕರ್ ಬಾಬು, ಶಿಲ್ಪಾ ಜಿ. ಸುವರ್ಣ, ಮಟ್ಟಾರು ರತ್ನಾಕರ್ ಹೆಗ್ಡೆ, ರೇಶ್ಮಾ ಉದಯ್ ಶೆಟ್ಟಿ, ಶ್ರೀಕಾಂತ್ ನಾಯಕ್, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಭಾಕರ್ ಪೂಜಾರಿ, ರಜಿನಿ ಹೆಬ್ಬಾರ್, ವಿಜಯ್ ಕೊಡವೂರು, ಸುಪ್ರಸಾದ್ ಶೆಟ್ಟಿ ಬೈಕಾಡಿ, ಶಿವಕುಮಾರ್ ಅಂಬಲಪಾಡಿ, ಪಕ್ಷದ ಇನ್ನಿತರ ಮೋರ್ಚಾ, ಶಕ್ತಿಕೇಂದ್ರ, ಬೂತ್ ಮಟ್ಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ನಗರಸಭಾ ಮಾಜಿ ಸದಸ್ಯ ಗಿರೀಶ್ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು.
ಚೊಂಬಿನೊಂದಿಗೆ ಮೆರವಣಿಗೆ
ಪ್ರತಿಭಟನಾ ಸಭೆಗೂ ಮೊದಲು ಜೋಡುಕಟ್ಟೆಯಿಂದ ಉಡುಪಿ ಸಿಟಿ ಬಸ್ ನಿಲ್ದಾಣದವರೆಗೆ ಉಡುಪಿ ನಗರ ಬಿಜೆಪಿಯ ಹಾಗೂ ಜಿಲ್ಲಾ ಬಿಜೆಪಿಯ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಜೆಟ್ನಲ್ಲಿ ಉಡುಪಿ ಜಿಲ್ಲೆ ಕಡೆಗಣಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಥರ್ಮಾಕೋಲ್ನಲ್ಲಿ ಸಿದ್ಧಪಡಿಸಿದ ಬೃಹತ್ ಚೊಂಬಿನೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸುವ ಮೂಲಕ ಜನರ ಗಮನ ಸೆಳೆದರು.
"
ಉಡುಪಿಯ ನಾಡಹಬ್ಬವಾದ ಪರ್ಯಾಯಕ್ಕೆ ಅನುದಾನ ನೀಡದ ಪ್ರಥಮ ಸರ್ಕಾರ ಇದು. ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಎಲ್ಪಿಜಿ ಕೊರತೆ ಆಗಿರುವುದು ತಿಳಿದಿದ್ದರೂ ರಸ್ತೆಯಲ್ಲಿ ಚಹಾ ಮಾಡಿ ಪ್ರತಿಭಟಿಸುವ ವಿಚಿತ್ರ ಪಕ್ಷವದು. ಜಿಲ್ಲೆಯ ಹಿಂದು ಮುಖಂಡರ ಮೇಲೆ ಸುಮೋಟೋ ಕೇಸ್ ಹಾಕಿಸುವ ಮೂಲಕ ಹಿಂದುತ್ವದ ಶಕ್ತಿ ಕುಗ್ಗುವಂತೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾವು ಹೆದರುವವರಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದೇವೆ.