ರಾಜ್ಯ ಕಾಂಗ್ರಸ್ ಸರ್ಕಾರ ಉಡುಪಿ ಜಿಲ್ಲೆಯನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಡಿಸಿ ಕಚೇರಿ ಬಳಿ ಪ್ರತಿಭಟಿಸಿದರು. ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ವಿಖ್ಯಾತ ಶೆಟ್ಟಿ, ಅಭಿರಾಜ್ ಸುವರ್ಣ, ಪ್ರಸಾದ್ ಬಿಲ್ಲವ, ಸಂಧ್ಯಾ ರಮೇಶ್ ಇತರರಿದ್ದರು.
ಉಡುಪಿ
ಕಾಂಗ್ರೆಸ್ ಸರ್ಕಾರದಿಂದ ಮಲತಾಯಿ ಧೋರಣೆ
* ಉಡುಪಿ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಆರೋಪ
* ಡಿಸಿ ಕಚೇರಿ ಬಳಿ ಜಿಲ್ಲಾ ಯುವ ಮೋರ್ಚಾ ಪ್ರತಿಭಟನೆ
ಉಡುಪಿ: ರಾಜ್ಯದ ಪ್ರವಾಸೋದ್ಯಮದಲ್ಲಿ ಉಡುಪಿಯು ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಯಾಗಿದೆ. ಆದರೆ, 2023ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೇ ಕಾಂಗ್ರೆಸ್ ಸರ್ಕಾರವು ಉಡುಪಿ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಲೇ ಇದೆ. ನೂತನ ಜಿಲ್ಲಾಸ್ಪತ್ರೆ ಕಾಮಗಾರಿ ಶೇ.75 ಮುಗಿದು ವರ್ಷವೇ ಕಳೆದಿದ್ದರೂ ಅದನ್ನು ಪೂರ್ಣಗೊಳಿಸಿ ಉದ್ಘಾಟಿಸಿದೆ ಬಡ ರೋಗಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಆರೋಪಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಉಡುಪಿ ಜಿಲ್ಲೆಯ ಎಲ್ಲ ಕ್ಷೇತ್ರದಲ್ಲಿ ಬಿಜೆಪಿ ಶಾಸಕರೇ ಇರುವುದರಿಂದ ಜಿಲ್ಲೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಗೂ ಅನ್ಯಾಯ
ಜಿಲ್ಲೆಗೆ ನರ್ಮ್ ಯೋಜನೆಯಡಿ 40ಕ್ಕೂ ಹೆಚ್ಚು ಬಸ್ ಈ ಹಿಂದೆ ಮಂಜೂರಾಗಿತ್ತು. ಆದರೆ, ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣ ಘೋಷಿಸಿ, ಇರುವ ಬಸ್ಗಳ ಸಂಖ್ಯೆಯನ್ನೇ ಕಡಿತ ಮಾಡಿದ್ದಾರೆ. ಇದೀಗ ಕೇವಲ 13 ಬಸ್ ಮಾತ್ರ ಸಂಚರಿಸುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಡ ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ. ಭೂಮಾಪಕರು 2 ತಿಂಗಳಿಂದ ಮುಷ್ಕರ ಕೈಗೊಂಡಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ವಿಖ್ಯಾತ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಭಿರಾಜ್ ಸುವರ್ಣ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬಿಲ್ಲವ, ಕಾರ್ಯದರ್ಶಿ ಪ್ರದಿಪ್ ಕುಂದರ್, ಬ್ರಹ್ಮಾವರ ಗ್ರಾಮಾಂತರ ಅಧ್ಯಕ್ಷ ರಾಜೀವ ಕುಲಾಲ್, ನಗರ ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ, ರೈತ ಮೋರ್ಚಾ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಹಾಗೂ ಪಕ್ಷದ ಇನ್ನಿತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಗೋ ಬ್ಯಾಕ್ ಲಕ್ಷ್ಮಕ್ಕ ಗೋ ಬ್ಯಾಕ್
ಜಿಲ್ಲಾ ಉಸ್ತುವಾರಿ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರೂ ಸಹ ಜಿಲ್ಲೆಯನ್ನು ಕಡೆಗಣಿಸುತ್ತಿದ್ದಾರೆ. ವರ್ಷಕ್ಕೆ ಎರಡು ಬಾರಿ ಧ್ವಜಾರೋಹಣ ಮಾಡಲು ಮಾತ್ರ ಉಡುಪಿಗೆ ಬರುತ್ತಾರೆ. ಮನೆಗಳಿಗೆ ಬರುವ ಅಪರೂಪದ ಅತಿಥಿಗಳಂತೆ ಜಿಲ್ಲೆಗೆ ಆಗಮಿಸುತ್ತಾರೆ. ಇಂತಹ ಉಸ್ತುವಾರಿ ಸಚಿವೆ ಉಡುಪಿ ಜಿಲ್ಲೆಗೆ ಬೇಡ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 'ಗೋ ಬ್ಯಾಕ್ ಗೋಬ್ಯಾಕ್ ಲಕ್ಷ್ಮಕ್ಕ ಗೋ ಬ್ಯಾಕ್' ಎಂದು ಘೋಷಣೆ ಕೂಗಿದರು. ಡಿಸಿ ಕಚೇರಿಯಲ್ಲಿ ನಡೆಯಲಿದ್ದ ಕೆಡಿಪಿ ಸಭೆಗೆ ಆಗಮಿಸುತ್ತಿದ್ದ ಸಚಿವೆ ಹೆಬ್ಬಾಳ್ಕರ್ ಅವರ ಕಾರನ್ನು ತಡೆದು ಮುತ್ತಿಗೆ ಹಾಕಲು ಯತ್ನಿಸಿದ ಯುವ ಮೋರ್ಚಾ ಕಾರ್ಯಕರ್ತರನ್ನು ಭಾರಿ ಸಂಖ್ಯೆಯಲ್ಲಿ ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಪೊಲೀಸರು ಅಡ್ಡವಾಗಿ ನಿಂತು ತಡೆದರು.
ಲಕ್ಷ್ಮೀ ಹೆಬ್ಬಾಳ್ಕರ್ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ತಡೆದರು.
"
ಉಡುಪಿ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಐತಿಹಾಸಿಕ ಉಡುಪಿಯ ಪರ್ಯಾಯಕ್ಕೂ ಸಹ ಅನುದಾನ ನೀಡದೆ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ. ಜಿಲ್ಲೆಯಲ್ಲಿ ಕಾಡುತ್ತಿರುವ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕ್ರಮ ಕೈಗೊಳ್ಳದಿದ್ದಲ್ಲಿ ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ.
— ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ.