ಮೂಲ್ಕಿ ವಿಜಯ ಸನ್ನಿಧಿ ಜಂಕ್ಷನ್ ಬಳಿ ಬೃಹತ್ ಹೊಂಡದಲ್ಲಿ ಬಾಳೆಗಿಡ ನೆಟ್ಟು ಸ್ಥಳೀಯರು ಪ್ರತಿಭಟನೆ ನಡೆಸಿದರು.
ಮೂಲ್ಕಿ: ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆಯ ಮೂಲ್ಕಿ ವಿಜಯ ಸನ್ನಿಧಿ ಜಂಕ್ಷನ್ ಬಳಿ ರಸ್ತೆಯಲ್ಲಿ ದೊಡ್ಡ ಹೊಂಡಗಳು ಉಂಟಾಗಿ ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದ್ದು, ಸ್ಥಳೀಯ ಆಟೋ ಚಾಲಕರು ಹಾಗೂ ಗ್ರಾಮಸ್ಥರು ಅಪಾಯಕಾರಿ ಹೊಂಡದಲ್ಲಿ ಬಾಳೆಗಿಡ ನೆಟ್ಟು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಹಲವಾರು ವರ್ಷಗಳಿಂದ ಮೂಲ್ಕಿಯಿಂದ ಆರಂಭಗೊಂಡು ಕಿನ್ನಿಗೋಳಿಯಾಗಿ ಸಾಗುವ ರಾಜ್ಯ ಹೆದ್ದಾರಿಯ ಲೋಕೋಪಯೋಗಿ ಇಲಾಖೆಗೆ ಸೇರಿರುವ ಈ ರಸ್ತೆ ಮಳೆಗಾಲದಲ್ಲಿ ಹದಗೆಡುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಸಮಸ್ಯೆಗಳಾಗುತ್ತಿವೆ.
ಲೋಕೋಪಯೋಗಿ ಇಲಾಖೆ ಮೀನಮೇಷ
ಪ್ರತಿ ಮಳೆಗಾಲದಲ್ಲಿ ಮೂಲ್ಕಿ ವಿಜಯ ಸನ್ನಿಧಿ, ಕಾರ್ನಾಡು , ಗೇರುಕಟ್ಟೆ, ಕುಬೆವೂರು, ಕೆಂಚನಕೆರೆ, ಅಂಗರಗುಡ್ಡೆ, ಕೆರೆಕಾಡು, ಪುನರೂರು, ಹೊಸ ಕಾವೇರಿ, ಪದ್ಮನೂರು, ಬಲವಿನ ಗುಡ್ಡೆ, ಕಿನ್ನಿಗೋಳಿ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿ ಹೊಂಡ- ಗುಂಡಿಗಳಿಂದ ತುಂಬಿ ಅಪಘಾತಗಳು ಸಂಭವಿಸುತ್ತಿದ್ದರೂ ಇಲಾಖೆ ದುರಸ್ತಿ ಮಾಡಲು ಮೀನಮೇಷ ಎಣಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಹೆದ್ದಾರಿ ಹೊಂಡಗಳಿಂದ ವಾಹನ ಸಂಚಾರಕ್ಕೆ ಹಾಗೂ ಜನರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ದಯವಿಟ್ಟು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿಪಡಿಸಬೇಕು.
— ಶಕೀಲ್, ಸ್ಥಳೀಯ ಆಟೋ ಚಾಲಕ
ಮೂಲ್ಕಿ ವಿಜಯ ಸನ್ನಿಧಿ ಜಂಕ್ಷನ್ ಬಳಿ ಬೃಹತ್ ಹೊಂಡದಲ್ಲಿ ಬಾಳೆಗಿಡ ನೆಟ್ಟು ಸ್ಥಳೀಯರು ಪ್ರತಿಭಟನೆ ನಡೆಸಿದರು.