ಕುಂದಾಪುರ ಮತ್ತು ಬೈಂದೂರು ತಾಲೂಕಿನ ಸಿ ಗ್ರೇಡ್ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸದಸ್ಯರ ಸಭೆ ನಡೆಯಿತು. ಪ್ರಮುಖರಾದ ಐ.ಎಚ್.ತುಂಬಗಿ, ವೆಂಕಟೇಶ ಅಡಿಗ, ನಾಗಪ್ಪ ಕೊಠಾರಿ, ವಾಸುದೇವ ಯಡಿಯಾಳ್ ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಜಿಲ್ಲೆಯ ಬಹುತೇಕ ದೇವಸ್ಥಾನಗಳ ಹೆಸರಿನಲ್ಲಿ ಆಸ್ತಿ ಇರುವುದು ಕಡಿಮೆ. ದೇವಸ್ಥಾನ ಅಕ್ಕಪಕ್ಕದಲ್ಲಿ ಸರ್ಕಾರಿ ಜಮೀನು ಇದ್ದಲ್ಲಿ ಗುರುತಿಸಿ ದೇವಸ್ಥಾನದ ಹೆಸರಿಗೆ ಮಾಡಿಕೊಡಲು ಕ್ರಮ ವಹಿಸುವಂತೆ ಸರ್ಕಾರ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಬಹುತೇಕ ದೇವಸ್ಥಾನಗಳ ಹೆಸರಿನಲ್ಲಿ ಜಾಗ ಇಲ್ಲ. ಹೀಗಾಗಿ ಅಂತಹ ದೇವಸ್ಥಾನಗಳು ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಪ್ರಸ್ತಾವನೆಯನ್ನು ಆದಷ್ಟು ಶೀಘ್ರ ಸಲ್ಲಿಸಬೇಕು ಎಂದು ಉಡುಪಿ ಜಿಲ್ಲಾ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಪ್ರಭಾರ ತಹಸೀಲ್ದಾರ್ ಐ.ಎಚ್.ತುಂಬಗಿ ತಿಳಿಸಿದರು.
ಉಡುಪಿ ಜಿಲ್ಲೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಆಶ್ರಯದಲ್ಲಿ ಕುಂದಾಪುರ ಶ್ರೀ ಕುಂದೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಮಂಗಳವಾರ ನಡೆದ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಸಿ ಗ್ರೇಡ್ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಧಾರ್ಮಿಕ ದತ್ತಿ ಇಲಾಖೆಯಡಿ 2012ರಲ್ಲಿನ ದಾಖಲೆಗಳ ಪ್ರಕಾರ ಬೈಂದೂರು ತಾಲೂಕಿನಲ್ಲಿ ಒಟ್ಟು 37 ಸಿ ಗ್ರೇಡ್ ದೇವಸ್ಥಾನಗಳಿದ್ದು, ಪ್ರಸ್ತುತ 31 ದೇವಸ್ಥಾನಗಳು ಮಾತ್ರ ಲೆಕ್ಕಕ್ಕೆ ಸಿಗುತ್ತಿವೆ. 6 ದೇವಸ್ಥಾನಗಳು ಅಸ್ತಿತ್ವದಲ್ಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕುಂದಾಪುರ ತಾಲೂಕಿನಲ್ಲಿ 2012ರಲ್ಲಿನ ದಾಖಲೆಗಳ ಪ್ರಕಾರ 185 ಸಿ ಗ್ರೇಡ್ ದೇವಸ್ಥಾನಗಳಿದ್ದು, ತಹಸೀಲ್ದಾರ್ ವರದಿಯಲ್ಲಿ ಪ್ರಸ್ತುತ 163 ದೇವಸ್ಥಾನಗಳು ಮಾತ್ರ ದಾಖಲೆಯಲ್ಲಿದ್ದು, 14 ದೇವಸ್ಥಾನಗಳು ಅಸ್ತಿತ್ವದಲ್ಲಿಲ್ಲ. 8 ದೇವಸ್ಥಾನಗಳ ಹೆಸರು ಪುನರಾವರ್ತನೆಯಾಗಿದೆ. ಹೀಗಾಗಿ ಅಸ್ವಿತ್ವದಲ್ಲಿಲ್ಲದ ದೇವಾಲಯಗಳ ಮಾಹಿತಿ ಇದ್ದಲ್ಲಿ ಇಲಾಖೆಗೆ ಸಲ್ಲಿಸಬೇಕು ಎಂದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ವೆಂಕಟೇಶ ಅಡಿಗ, ನಾಗಪ್ಪ ಕೊಠಾರಿ, ಶ್ರೀ ಕುಂದೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ಯಡಿಯಾಳ್ ಹಾಗೂ ವಿವಿಧ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಮೂಲ ಸೌಲಭ್ಯ ಅಳವಡಿಕೆಗೆ ಆದ್ಯತೆ
ದೇವಸ್ಥಾನಗಳಲ್ಲಿ ಕುಡಿಯುವ ನೀರು, ಶೌಚಗೃಹ ಹಾಗೂ ಭಕ್ತರು ತಂಗಲು ವ್ಯವಸ್ಥೆ ಮಾಡಬೇಕಿದ್ದು, ಆದಾಯ ಇರುವ ದೇವಸ್ಥಾನಗಳು ಅಂದಾಜು ಪಟ್ಟಿ ತಯಾರಿಸಿ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಬಹುದು. ಆದಾಯ, ಅನುದಾನದ ಕೊರತೆ ಇರುವ ದೇವಸ್ಥಾನಗಳು ಅಂದಾಜು ಪಟ್ಟಿ ತಯಾರಿಸಿ ಕಳುಹಿಸಿಕೊಟ್ಟರೆ ಆದ್ಯತೆ ಮೇರೆಗೆ ಬೇರೆ ಇಲಾಖೆಗಳ ಸಹಕಾರದಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ. ದೇವಸ್ಥಾನದಲ್ಲಿ ಮೂಲ ಸೌಲಭ್ಯ ಅಳವಡಿಸಲು ಇಚ್ಛಿಸಿದ್ದಲ್ಲಿ ಅಂದಾಜು ಪಟ್ಟಿಯೊಂದಿಗೆ ಪ್ರಸ್ತಾವನೆ ಸಲ್ಲಿಸಬೇಕು. ತಸ್ತಿಕ್ ಹೊರತುಪಡಿಸಿ, ಉಳಿದಂತೆ ದೇವಸ್ಥಾನದ ಆದಾಯ ವೃದ್ಧಿಸುವ ಕೆಲಸ ಮಾಡಬೇಕು. ಆಸ್ತಿ ದೃಢೀಕರಣ ಮತ್ತು ಸಂರಕ್ಷಣೆ, ದೇವಸ್ಥಾನಗಳಲ್ಲಿ ಕುಡಿಯುವ ನೀರು ಹಾಗೂ ಶೌಚಗೃಹಕ್ಕೆ ಆದ್ಯತೆ ನೀಡಬೇಕು ಎಂದು ಐ.ಎಚ್.ತುಂಬಗಿ ತಿಳಿಸಿದರು.