Theft 
ಉಡುಪಿ

ಕೋರ್ದಬ್ಬು ದೈವಸ್ಥಾನದಲ್ಲಿ ಸೊತ್ತು ಕಳವು

ಮೂಲ್ಕಿ: ಕಿಲ್ಪಾಡಿ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಮಂಗಳವಾರ ಮಧ್ಯರಾತ್ರಿ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವುಗೈದಿದ್ದಾರೆ.
ಕಳ್ಳರು ದೈವಸ್ಥಾನದ ಹಿಂಭಾಗದಲ್ಲಿರುವ ನೀರಿನ ಟ್ಯಾಂಕ್ ಬಳಿಯಿಂದ ಆವರಣ ಗೋಡೆ ಹತ್ತಿ ಒಳಗೆ ನುಗ್ಗಿ ಗರ್ಭಗುಡಿಯ ಬಾಗಿಲಿನ ಬೀಗ ತುಂಡರಿಸಿ ದೈವದ ಬೆಳ್ಳಿಯ ಮೊಗ, ಸೊಂಟದ ಪಟ್ಟಿ, ದೈವದ ಕಡ್ಸಲೆ ಸಹಿತ ಚಿನ್ನ ಹಾಗೂ ಬೆಳ್ಳಿಯ ಸೊತ್ತುಗಳನ್ನು ಕಳವುಗೈದಿದ್ದಾರೆ. ಬಳಿಕ ದೈವಸ್ಥಾನದ ಎರಡು ಕೋಣೆಯ ಬೀಗ ಮುರಿದು ಕೋಣೆಯನ್ನು ಜಾಲಾಡಿದ್ದಾರೆ.
ಕಪ್ಪು ಕೋಟ್ ಧರಿಸಿದ ಒಬ್ಬಾತ ಗೇರುಕಟ್ಟೆ ಬಳಿಯಿಂದ ನಡೆದುಕೊಂಡು ದೈವಸ್ಥಾನದ ಆವರಣ ಗೋಡೆ ಬಳಿ ಮಧ್ಯರಾತ್ರಿ 1.03 ನಿಮಿಷಕ್ಕೆ ಬರುವ ದೃಶ್ಯ ಸ್ಥಳೀಯ ಮನೆಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಇನ್ನೊಂದು ಸಿಸಿ ಕ್ಯಾಮರಾದಲ್ಲಿ ಎರಡು ಬೈಕ್‌ನಲ್ಲಿ ಬರುವ ಮೂವರು ವಾಪಸಾಗುವಾಗ ಒಂದೇ ಬೈಕ್‌ನಲ್ಲಿ ತೆರಳುತ್ತಿರುವ ದೃಶ್ಯ ದಾಖಲಾಗಿದೆ.
ಮಂಗಳೂರು ಎಸಿಪಿ ಶ್ರೀಕಾಂತ್, ಮೂಲ್ಕಿ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು, ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಗೋಪಿನಾಥ ಪಡಂಗ, ಸತೀಶ್ ಕಿಲ್ಪಾಡಿ, ಸಾಮಾಜಿಕ ಕಾರ್ಯಕರ್ತರಾದ ವಿಶುಕುಮಾರ್, ಭೀಮಾ ಶಂಕರ್, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಶಂಕರ್ ಪಡಂಗ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.