ರಾ.ಹೆ. 169 ಎ ಕಾಮಗಾರಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು.
ಉಡುಪಿ: ಮಲ್ಪೆಯಿಂದ ಕರಾವಳಿ ಬೈಪಾಸ್ವರೆಗಿನ ಬಾಕಿ ಉಳಿದಿರುವ ಭೂ ಸ್ವಾಧಿನ ಪ್ರಕ್ರಿಯೆಯನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಕೂಡಲೇ ಭೂ ಮಾಲೀಕರಿಗೆ ಪರಿಹಾರ ಧನವನ್ನು ಪಾವತಿ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ರಾ.ಹೆ. 169 ಎ ಕಾಮಗಾರಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಲ್ಪೆ&ತೀರ್ಥಹಳ್ಳಿವರೆಗಿನ ಕಾಮಗಾರಿ ಜಿಲ್ಲೆಯಲ್ಲಿ ಅಂತಿಮ ಹಂತದಲ್ಲಿದೆ. ಆದರೆ ಕಾಮಗಾರಿ ನಡೆಯುತ್ತಿರುವ ಕೆಲವು ಕಡೆಗಳಲ್ಲಿ ಭೂ ಸ್ವಾಧಿನ ಪ್ರಕ್ರಿಯೆಯು ಪೂರ್ಣ ಪ್ರಮಾಣದಲ್ಲಿ ಆಗದ ಕಾರಣ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಭೂ ಸ್ವಾಧಿನ ಕಾರ್ಯಗಳನ್ನು ಕಂದಾಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿಯಂತರರ ಇಲಾಖೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಪೂರ್ಣಗೊಳಿಸಬೇಕು ಎಂದರು.
ಭೂ ಮಾಲೀಕರಿಗೆ ವೈಜ್ಞಾನಿಕವಾಗಿ ಸೂಕ್ತ ಪರಿಹಾರವನ್ನು ನೀಡಬೇಕು. ಹೆದ್ದಾರಿ ಕಾಮಗಾರಿ ವಿಳಂಬ ಗತಿಯಲ್ಲಿ ಸಾಗುತ್ತಿರುವುದು ಸರಿಯಲ್ಲ. ನೆನೆಗುದಿಗೆ ಬಿದ್ದಿರುವ ಪರ್ಕಳ ಭೂಸ್ವಾಧಿನ ಪ್ರಕ್ರಿಯೆಯಲ್ಲಿ ಕೋರ್ಟ್ಗೆ 8.25 ಕೋಟಿ ರೂ. ಜಮಾ ಮಾಡಲಾಗಿದೆ. 13 ಜನರಿಗೆ ಸಂಬಂಧಿಸಿದ 419 ಮೀ ರಸ್ತೆಯಲ್ಲಿ ಒಬ್ಬರು ಮಾತ್ರ ಕೋರ್ಟ್ಗೆ ಹೋಗಿದ್ದು, ಈ ಬಗ್ಗೆ ಮರು ಸರ್ವೆ ಮಾಡಿ ಸಮಸ್ಯೆ ಇತ್ಯರ್ಥಗೊಳಿಸಿ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಿದರು.
ಹಿರಿಯಡ್ಕದಿಂದ ಪೆರ್ಡೂರುವರೆಗೆ ಬಾಕಿ ಇದ್ದ 2.69 ಕಿಲೋ ಮೀಟರ್ ಸ್ವಾಧಿನವಾಗಿದೆ. ಹೆಬ್ರಿ ಪಾಡಿಗಾರ ಪ್ರದೇಶದಲ್ಲಿ 1.4 ಕಿ.ಮೀ ಪ್ರದೇಶದಲ್ಲಿ ಅರಣ್ಯ ಇಲಾಖೆ ಮರ ಕಡಿಯಲು ಅನುಮತಿ ನೀಡಿದೆ. ಹೆಬ್ರಿಯಿಂದ ಆಗುಂಬೆ ಘಾಟಿವರೆಗೆ ಕಾಮಗಾರಿಗೆ 72 ಕೋಟಿ ರೂ. ಬಿಡುಗಡೆಯಾಗಿದೆ. ಹೆಬ್ರಿ ಬಳಿಕ ಆಗುಂಬೆವರೆಗೆ ಕಾಮಗಾರಿಗೆ ಡಿ.ಪಿ.ಆರ್ ತಯಾರಿಸಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಕಲ್ಮಾಡಿಯಿಂದ ಮಲ್ಪೆ ಹಾರ್ಬರ್ ವರೆಗಿನ 1.18 ಕಿಲೋ ಮೀಟರ್ ಭೂ ಸ್ವಾಧಿನ ಪ್ರಕ್ರಿಯೆ ಪೂರ್ಣಗೊಂಡಿದೆ. ಬುಧವಾರದಿಂದಲೇ ಕಾಮಗಾರಿ ಪ್ರಾರಂಭಿಸಬೇಕೆಂದು ಅಭಿಯಂತರರಿಗೆ ಸೂಚನೆ ನೀಡಿದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ರಾ. ಹೆದ್ದಾರಿಯಲ್ಲಿ ಜಾಗ ಕಳೆದುಕೊಂಡಿರುವ ಮತ್ತು ಪರಿಹಾರ ಧನ ಪಾವತಿಸಲು ಬಾಕಿ ಇರುವವರ ಪಟ್ಟಿ ತಯಾರಿಸಿ ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸಲು ತಿಳಿಸಿದರು.
ಸಭೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಕುಂದಾಪುರ ಸಹಾಯಕ ಕಮಿಶನರ್ ರಶ್ಮಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ಮತ್ತಿತರರು ಉಪಸ್ಥಿತರಿದ್ದರು.