ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಸೂರ್ಯ ಘರ್​ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸ್ವರೂಪಾ ಟಿ.ಕೆ., ನರಸಿಂಹ ಹಾಗೂ ವಿವಿಧ ಅಧಿಕಾರಿಗಳು ಇದ್ದರು. 
ಉಡುಪಿ

ಸೂರ್ಯ ಘರ್​ ಯೋಜನೆಯಿಂದ ವಿದ್ಯುತ್​ ಹೊರೆ ಇಳಿಕೆ

* ಸಂಸದ ಕೋಟ ಶ್ರೀನಿವಾಸ ಪೂಜಾರಿ ಅನಿಸಿಕೆ

ಉಡುಪಿ ಡಿಸಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ

ಉಡುಪಿ: ಪ್ರಧಾನಮಂತ್ರಿ ಸೂರ್ಯ ಘರ್​ ಯೋಜನೆಯ ಸಬ್ಸಿಡಿ ದರದಲ್ಲಿ ಮೇಲ್ಛಾವಣಿಗೆ ಸೌರ ಫಲಕ ಅಳವಡಿಸಿಕೊಂಡರೆ ಉಚಿತವಾಗಿ ವಿದ್ಯುತ್​ ಲಭಿಸುವುದಲ್ಲದೆ, ಮನೆಗಳ ವಿದ್ಯುತ್​ ಬಿಲ್​ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಾಧ್ಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ (ಫೆ.7) ಆಯೋಜಿಸಿದ್ದ ಪ್ರಧಾನಮಂತ್ರಿ ಸೂರ್ಯ ಘರ್​ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಸೌರ ಶಕ್ತಿಯ ಮಾರಾಟ

ಈ ಯೋಜನೆಯಡಿ ಸೌರ ಶಕ್ತಿಯನ್ನೇ ವಿದ್ಯುತ್​ ಆಗಿ ಬಳಸಿಕೊಳ್ಳಬಹುದಾಗಿದೆ. ಅಲ್ಲದೆ, ಸೌರ ಶಕ್ತಿ ವ್ಯವಸ್ಥೆಗಳಿಂದ ಉತ್ಪಾದಿಸುವ ಹೆಚ್ಚುವರಿ ಶಕ್ತಿಯನ್ನು ಮೆಸ್ಕಾಂಗಳಿಗೆ ಮಾರಾಟ ಮಾಡುವ ಮೂಲಕ ಆದಾಯ ಗಳಿಸಬಹುದಾಗಿದೆ. ತಿಂಗಳಿಗೆ 3 ಕೆವಿಯಂತೆ ಸರಾಸರಿ 300 ಯೂನಿಟ್​ಗಿಂತ ಹೆಚ್ಚು ವಿದ್ಯುತ್​ ಉತ್ಪಾದಿಸಬಹುದು. ಇದು ವಿಶ್ವಾಸಾರ್ಹ ಶಕ್ತಿ ಹಾಗೂ ಸಂಭಾವ್ಯ ಆದಾಯದ ಮೂಲವಾಗಿದೆ ಎಂದರು.

ವಿದ್ಯುತ್​ ಅವಲಂಬನೆ ಇಳಿಕೆ

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಸೂರ್ಯ ಘರ್​ ಯೋಜನೆಯಡಿ ಸೌರ ವಿದ್ಯುತ್​ ಘಟಕ ಅಳವಡಿಸಿಕೊಂಡರೆ ಸಾಂಪ್ರದಾಯಿಕ ಇಂಧನದ ಅವಲಂಬನೆ ಕಡಿಮೆಯಾಗಲಿದೆ. ಪರಿಸರ ಮಾಲಿನ್ಯವೂ ನಿಯಂತ್ರಣವಾಗಲಿದೆ. ಹೀಗಾಗಿ ಯೋಜನೆಯಡಿ ದೊರಕುವ ಸಹಾಯಧನ ಹಾಗೂ ಸೌಲಭ್ಯದ ಕುರಿತು ಹೆಚ್ಚು ಪ್ರಚಾರ ನೀಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್​ ನರಸಿಂಹ, ಕಿರಿಮಂಜೇಶ್ವರ, ಕೋಟತಟ್ಟು, ಉಪ್ಪೂರು, ಮಜೂರು ಹಾಗೂ ನಿಟ್ಟೆ ಗ್ರಾಪಂಗಳ ಅಧ್ಯಕ್ಷರು, ಪಿಡಿಒಗಳು, ಕಮಿಟಿಯ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

ಆಯ್ಕೆಯಾಗುವ ಗ್ರಾಮಕ್ಕೆ ಕೋಟಿ ರೂ. ಬಹುಮಾನ

ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದರಿ ಸೋಲಾರ್​ ಗ್ರಾಮಕ್ಕೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ, ಬ್ರಹ್ಮಾವರ ತಾಲೂಕಿನ ಕೋಟತಟ್ಟು, ಉಡುಪಿ ತಾಲೂಕಿನ ಉಪ್ಪೂರು, ಕಾಪು ತಾಲೂಕಿನ ಮಜೂರು ಹಾಗೂ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮ ಆಯ್ಕೆ ಮಾಡಲಾಗಿದೆ. ಸೌರ ಶಕ್ತಿ ಘಟಕ ಅಳವಡಿಸಲು ಡಿಸೆಂಬರ್​ 31ರ ವರೆಗೆ ಚಾಲೆಂಜ್​ ಅವಧಿ ನಿಗದಿಸಲಾಗಿದೆ. ಕಿರಿಮಂಜೇಶ್ವರ ಗ್ರಾಮದವರು 26 ಕೆವಿ, ಕೋಟತಟ್ಟು ಗ್ರಾಮದವರು 1,777 ಕೆವಿ, ಉಪ್ಪೂರು ಗ್ರಾಮದವರು 163 ಕೆವಿ, ಮಜೂರು 13.88 ಕೆವಿ ಹಾಗೂ ನಿಟ್ಟೆ ಗ್ರಾಮದವರು 1,577.31 ಕೆವಿ ಸೋಲಾರ್​ ಅಳವಡಿಸಿದ್ದಾರೆ. ಅವುಗಳಲ್ಲಿ ಯಾವ ಗ್ರಾಮ ಹೆಚ್ಚು ಪರಿಣಾಮಕಾರಿಯಾಗಿ ಸೌರ ಶಕ್ತಿ ಘಟಕ ಅನುಷ್ಠಾನ ಮಾಡಿದೆ ಎಂಬ ಕುರಿತು ಮೈಸೂರು ರೀಜನಲ್​ ಕಮಿಷನ್​ ಪರಾಮರ್ಶಿಸಿ, ಒಂದು ಗ್ರಾಮ ಆಯ್ಕೆ ಮಾಡಲಿದ್ದಾರೆ. ಆಯ್ಕೆಯಾದ ಗ್ರಾಮಕ್ಕೆ 1 ಕೋಟಿ ರೂ. ಬಹುಮಾನ ಅನುದಾನದ ರೂಪದಲ್ಲಿ ಸರ್ಕಾರ ನೀಡಲಿದೆ. ಅದರಲ್ಲಿ ಸೋಲಾರ್​ ಪಾರ್ಕ್​ ಅಳವಡಿಸಲು ಅವಕಾಶ ಕಲ್ಪಿಸಲಿದೆ ಎಂದು ಸಂಸದ ಕೋಟ ಮಾಹಿತಿ ನೀಡಿದರು.
"

ಹರ್​ ಘರ್​ ಸೂರ್ಯ ಯೋಜನೆಯು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ದೇಶಾದ್ಯಂತ 1 ಕೋಟಿ ಮನೆಗಳ ಗುರಿ ಹೊಂದಿದ್ದು, 75,012 ಕೋಟಿ ರೂ. ಹಣ ವಿನಿಯೋಗಿಸಲಾಗಿದೆ. ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್​ ಯೋಜನೆಯಡಿ 4,435 ಜನರು ಅರ್ಜಿ ಸಲ್ಲಿಸಿದ್ದು, ಅವರಲ್ಲಿ 4,413 ಜನರಿಗೆ ಆರ್ಥಿಕವಾಗಿ ಅನುಮೋದನೆ ದೊರೆತಿದೆ. 1,592 ಜನರು ವೆಂಡರ್​ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. 1,222 ಜನರಿಗೆ ಅನುಷ್ಠಾನಗೊಳಿಸಿದ್ದು, 1,135 ಜನರಿಗೆ ಈಗಾಗಲೇ ಸಬ್ಸಿಡಿ ನೀಡಲಾಗಿದೆ.