ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಸಂಭ್ರಮದ ವರ್ಷಾಚರಣೆ ಕಾರ್ಯಕ್ರಮವನ್ನು ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು. ಪ್ರಮುಖರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಮೊಳಹಳ್ಳಿ ಮಹೇಶ ಹೆಗ್ಡೆ ಸುವರ್ಣ, ಸುಧೀರ ಕುಮಾರ್ ಜೆ., ಅಮೃತ್ ಹೊಳ್ಳ, ಮೋಹನ ಪೂಜಾರಿ, ಗುರುರಾಜ ಹೆಬ್ಬಾರ್, ಭರತ್ ದೇವಾಡಿಗ ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಬೈಂದೂರು
ಜಿಲ್ಲೆಯ ಸರ್ವಶ್ರೇಷ್ಠ ರೈತರ ಪತ್ತಿನ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ರೈತರಿಗೆ ಅನುಕೂಲವಾಗುವ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಸ್ಪರ್ಧಾತ್ಮಕ ಯುಗದಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸುವಂತಾಗಿದೆ. ಸಂಘದ ಸುವರ್ಣ ಮಹೋತ್ಸವ ಅಂಗವಾಗಿ ವರ್ಷವಿಡಿ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿ ಹೊಸ ಮಜಲಿಗೆ ನಾಂದಿಯಾಗಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಉಪ್ಪುಂದ ರೈತಸಿರಿ ಸಭಾಂಗಣದಲ್ಲಿ ಶುಕ್ರವಾರ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಸಂಭ್ರಮದ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ, ಸಂಘ ಮುಂದಿನ ದಿನಗಳಲ್ಲಿ ಹೊಸ ಹೊಸ ಯೋಜನೆಗಳ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ, ಕೃಷಿ, ಹೈನುಗಾರಿಕೆ ಹಾಗೂ ಕೃಷಿಯೇತರ ಉಪಕಸುಬುಗಳಿಗೆ ಉತ್ತೇಜನ ನೀಡಲಿದೆ. ಜತೆಗೆ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಸೇವೆ ನೀಡಲಿದೆ. ಇದಕ್ಕೆ ಸಂಘದ ಸರ್ವ ಸದಸ್ಯರ ಸಹಕಾರ ಅಗತ್ಯ ಎಂದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಮೊಳಹಳ್ಳಿ ಮಹೇಶ ಹೆಗ್ಡೆ, ಸುವರ್ಣ ಸಂಭ್ರಮದ ಲಾಂಛನ ಬಿಡುಗಡೆಗೊಳಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ ಕುಮಾರ್ ಜೆ. ಸಂಘದ ಕೋರ್ ಬ್ಯಾಂಕಿಂಗ್ ಸಿಸ್ಟಂಗೆ ಚಾಲನೆ ನೀಡಿದರು.
ನಿವೃತ್ತ ವಿಶೇಷಾಧಿಕಾರಿ ಅಮೃತ್ ಹೊಳ್ಳ, ನಿರ್ದೇಶಕರಾದ ಮೋಹನ ಪೂಜಾರಿ, ಗುರುರಾಜ ಹೆಬ್ಬಾರ್, ಭರತ್ ದೇವಾಡಿಗ, ಹೂವಯ್ಯ ನಾಯ್ಕ, ಲೀಲಾ ಪೂಜಾರ‌್ತಿ, ಪ್ರಕಾಶ ಪೂಜಾರಿ, ಉಯಕುಮಾರ್ ಶೆಟ್ಟಿ, ರಾಜೇಶ ದೇವಾಡಿಗ, ದಿನೀತಾ ಶೆಟ್ಟಿ, ರಂಜಿತ್‌ಕುಮಾರ್ ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮೇಲ್ವಿಚಾರಕ ಶಿವರಾಮ ಯಡ್ತರೆ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಮಂಜು ದೇವಾಡಿಗ ಸ್ವಾಗತಿಸಿದರು. ಸಿಇಒ ವಿಷ್ಣು ಆರ್. ಪೈ ನಿರೂಪಿಸಿದರು. ಹಿರಿಯ ವ್ಯವಸ್ಥಾಪಕ ಚಂದಯ್ಯ ಶೆಟ್ಟಿ ವಂದಿಸಿದರು.
ಸಂಘ 1976ರಲ್ಲಿ ಆರಂಭಗೊಂಡು, ಮೊದಲ 21 ವರ್ಷ ನಷ್ಟದಲ್ಲಿದ್ದು, 1997ರಲ್ಲಿ 14 ಲಕ್ಷ ರೂ. ಲಾಭ ಗಳಿಸುವ ಮೂಲಕ ನೂತನ ಹೆಜ್ಜೆಯಿರಿಸಿತು. ಇಂದು ಸಂಘ ಬಲಿಷ್ಠವಾಗಿ ಬೆಳೆದಿದ್ದು, 1,300 ಕೋಟಿ ರೂ. ವಾರ್ಷಿಕ ವ್ಯವಹಾರ ನಡೆಸಿ 7 ಕೋಟಿ ರೂ.ಗೂ ಮಿಕ್ಕಿ ನಿವ್ವಳ ಲಾಭ ಗಳಿಸಿ ಜಿಲ್ಲೆಯ ಪ್ರತಿಷ್ಠಿತ ಕೃಷಿಪತ್ತಿನ ಸಹಕಾರಿ ಸಂಘಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸಂಘದ ವತಿಯಿಂದ 15 ಕೋಟಿ ರೂ. ವೆಚ್ಚದಲ್ಲಿ ಅಗ್ರಿಮಾಲ್ ನಿರ್ಮಾಣ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಅದಕ್ಕೆ ಹೊಂದಿಕೊಂಡು ಬೃಹತ್ ನಿತ್ಯ ರೈತರ ಸಂತೆ ಆರಂಭಿಸುವ ಚಿಂತನೆಯಿದೆ.