ಕನ್ನಡದ ಪ್ರಸಿದ್ಧ ಕವಿ, ಕಥೆಗಾರ, ವಿಮರ್ಶಕ ಸುಬ್ರಾಯ ಚೊಕ್ಕಾಡಿ. 
ಉಡುಪಿ

'ಪ್ರೊ. ಪರಮೇಶ್ವರ ಭಟ್ಟ' ಪ್ರಶಸ್ತಿ ಪ್ರದಾನ ಫೆ.13ರಂದು

* ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿಗೆ ಪುರಸ್ಕಾರ

ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಪ್ರಸ್ತುತ ವರ್ಷದಿಂದ ಕೊಡಲ್ಪಡುವ 'ಪ್ರೊ. ಎಸ್​.ವಿ. ಪರಮೇಶ್ವರ ಭಟ್ಟ' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಫೆ.13ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಕನ್ನಡದ ಪ್ರಸಿದ್ಧ ಕವಿ, ಕಥೆಗಾರ, ವಿಮರ್ಶಕರಾದ ಸುಬ್ರಾಯ ಚೊಕ್ಕಾಡಿ ಅವರಿಗೆ ಮಾಹೆ ಸಹ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರೊ. ಬಿ.ಎ. ವಿವೇಕ್​ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಹಾಗೂ ಹಿರಿಯ ಸಾಹಿತಿ ಡಾ. ನಾ.ದಾಮೋದರ್​ ಶೆಟ್ಟಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಪ್ರೊ. ಎಸ್​.ವಿ. ಪರಮೇಶ್ವರ ಭಟ್ಟ ಅವರ ಪುತ್ರ ಎಸ್​.ಪಿ. ರಾಮಚಂದ್ರ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಪಾಲ್ಗೊಳ್ಳಿದ್ದಾರೆ. 
ಕಾರ್ಯಕ್ರಮದ ಆರಂಭದಲ್ಲಿ ಉಡುಪಿಯ ಪ್ರಸಿದ್ಧ ಗಾಯಕ ಕೆ.ಆರ್​. ರಾಘವೇಂದ್ರ ಆಚಾರ್ಯ ಅವರಿಂದ ಎಸ್​.ವಿ. ಪರಮೇಶ್ವರ ಭಟ್ಟ ಹಾಗೂ ಸುಬ್ರಾಯ ಚೊಕ್ಕಾಡಿ ರಚಿತ ಕವನಗಳ ಗಾಯನ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್​ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.