ಉಡುಪಿಯಲ್ಲಿ ಆಯೋಜಿಸಿದ್ದ ಆದಿಮ ಕಲಾ ಟ್ರಸ್ಟ್ನ ವಾರ್ಷಿಕೋತ್ಸವದಲ್ಲಿ ಪ್ರೊ. ರವೀಂದ್ರ ಕೋರಿಸೆಟ್ಟರ್ ದಂಪತಿಗೆ 'ಆದಿಮ ಕಲಾರತ್ನ' ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ರಾಜೇಂದ್ರ ಕರ್ಕೇರ, ಡಾ. ರಘುರಾಮ್ ಶೆಟ್ಟಿ ಶೆಟ್ಟಿ ಗುಳ್ಳಾಡಿ, ಪ್ರೊ. ಟಿ. ಮುರುಗೇಶಿ, ಪ್ರೊ. ವರದೇಶ್ ಹಿರೇಗಂಗೆ, ಯುಸೂಫ್ ಹೈದರ್ ಇದ್ದರು.
* ಯುವಪೀಳಿಗೆಗೆ ಪ್ರೊ. ರವೀಂದ್ರ ಕೋರಿಸೆಟ್ಟರ್ ಕರೆ
* 'ಆದಿಮ ಕಲಾರತ್ನ' ರಾಷ್ಟ್ರೀಯ ಪ್ರಶಸ್ತಿ ಸ್ವೀಕಾರ
ಉಡುಪಿ: ಕರ್ನಾಟಕದ ಕರಾವಳಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅಪಾರವಾದ ಪುರಾತತ್ತ್ವ ಹಾಗೂ ಐತಿಹಾಸಿಕ ನೆಲೆಗಳಿವೆ. ದಕ್ಷಿಣ ಭಾರತದ ಹಲವಾರು ಪ್ರದೇಶಗಳಲ್ಲಿರುವ ಅಂತಹ ನೆಲೆಗಳ ಕುರಿತು ಮಾಹಿತಿಯೇ ಇಲ್ಲ. ದೇಶದ ಕರಾವಳಿ ಭಾಗವಾದ ಕೇರಳ ಹಾಗೂ ಕೊಂಕಣದ ಇತಿಹಾಸ ಹೆಚ್ಚು ಶ್ರೀಮಂತವಾಗಿದೆ. ಇಂದಿನ ಯುವಪೀಳಿಗೆ ಪುರಾತತ್ತ್ವ ನೆಲೆ, ಅವುಗಳ ಇತಿಹಾಸ ಹಾಗೂ ಪಶ್ಚಿಮ ಘಟ್ಟಗಳ ವಿಶೇಷತೆ ಕುರಿತು ಅರಿತುಕೊಳ್ಳಬೇಕು. ಅದಕ್ಕಾಗಿ ಅಧ್ಯಯನ ಮಾಡಬೇಕು ಎಂದು ಭಾರತದ ಪ್ರಖ್ಯಾತ ಪುರಾತತ್ತ್ವ ವಿದ್ವಾಂಸ ಪ್ರೊ. ರವೀಂದ್ರ ಕೋರಿಸೆಟ್ಟರ್ ಕರೆ ನೀಡಿದರು.
ಉಡುಪಿಯ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಆದಿಮ ಕಲಾ ಟ್ರಸ್ಟ್ (ರಿ.) ಉಡುಪಿ ವತಿಯಿಂದ ಭಾನುವಾರ (ಮಾ.1) ಆಯೋಜಿಸಿದ್ದ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಉದ್ಘಾಟಿಸಿ, 'ಆದಿಮ ಕಲಾರತ್ನ' ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಪುಸ್ತಕ ಬಿಡುಗಡೆ
ಸಂಸ್ಥೆಯ ವತಿಯಿಂದ ಮುದ್ರಿಸಿದ 'ಕರ್ನಾಟಕ ಕರಾವಳಿಯ ಆದಿಮ ಕಲೆ' ಪುಸ್ತಕವನ್ನು ಮಣಿಪಾಲ ಮಾಹೆಯ ಗಾಂಧೀಯನ್ ಸೆಂಟರ್ನ ನಿಕಟಪೂರ್ವ ನಿರ್ದೇಶಕ ಪ್ರೊ. ವರದೇಶ್ ಹಿರೇಗಂಗೆ ಬಿಡುಗಡೆ ಮಾಡಿದರು. ಅಲ್ಲದೆ, ಟ್ರಸ್ಟ್ನ 'ಆದಿಮಕಲಾ ಪ್ರಕಾಶನ' ಉದ್ಘಾಟಿಸಿ ಶುಭಹಾರೈಸಿದರು. ಪುಸ್ತಕದ ಕುರಿತು ಡಾ. ಆರ್. ಮೋಹನ್ ಮಾತನಾಡಿದರು.
ಬಹುಮಾನ ವಿತರಣೆ
ಪ್ರಥಮ ವಾರ್ಷಿಕೋತ್ಸವದ ನಿಮಿತ್ತ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 'ಮರೆಯಲಾಗದ ಕರ್ನಾಟಕದ ಇತಿಹಾಸಕಾರರು' ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಾ. ರಘುರಾಮ್ ಶೆಟ್ಟಿ ಗುಳ್ಳಾಡಿ ಬಹುಮಾನ ವಿತರಿಸಿದರು.
ಆದಿಮ ಕಲಾ ಟ್ರಸ್ಟ್ (ರಿ.)ನ ಸ್ಥಾಪಕಾಧ್ಯಕ್ಷ ಡಾ.ರಾಜೇಂದ್ರ ಕರ್ಕೇರ ಗೋವಾ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ನ ಉಪಾಧ್ಯಕ್ಷ ಯುಸೂಫ್ ಹೈದರ್ ಉಪಸ್ಥಿತರಿದ್ದರು.
ಪ್ರೇಮನಾಥ್ ಪ್ರಾರ್ಥಿಸಿದರು. ಟ್ರಸ್ಟ್ನ ಕಾರ್ಯನಿರ್ವಾಹಕ ಸದಸ್ಯ ಪ್ರೊ. ಟಿ. ಮುರುಗೇಶಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೇಯಸ್ ಕೋಲ್ಪೆ ಕಾರ್ಯಕ್ರಮ ನಿರ್ವಹಿಸಿದರು.
ಗುಳ್ಳಾಡಿಯ ರಾಣಿ ಚಿಕ್ಕಾಯಿತಾಯಿ ವಿಜಯ ನಗರ ಸಾಮ್ರಾಜ್ಯದ ಸ್ಥಾಪಕಿಯಾಗಿದ್ದಳು. ಆದರೆ, ಈ ರಾಣಿಯ ಕುರಿತು ಹಾಗೂ ಅಳುಪರ ಕುರಿತು ಇತಿಹಾಸದಲ್ಲಿ ಯಾವುದೇ ಮಾಹಿತಿ ಇಲ್ಲ. ಪ್ರೊ.ಟಿ. ಮುರುಗೇಶಿ ಅವರು ರಾಣಿ ಚಿಕ್ಕಾಯಿತಾಯಿಯ ಜೀವನ, ಸಾಧನೆ, ಇತಿಹಾಸ ತಿಳಿಸುವ ಪುಸ್ತಕ ಬರೆಯಬೇಕು.