ಉಡುಪಿಯಲ್ಲಿ ಪ್ರೊ.ಕೆ.ಪಿ. ರಾವ್​ ಹಾಗೂ ಪ್ರೊ.ಕನರಾಡಿ ವಾದಿರಾಜ್​ ಭಟ್​ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಬಿ.ಎ. ವಿವೇಕ್​ ರೈ, ಡಾ. ಗಾಯತ್ರಿ ಪೈ, ಡಾ. ಕೆ.ರಾಘವ ನಂಬಿಯಾರ್​, ಡಾ. ಚಂದ್ರಾವತಿ ಶೆಟ್ಟಿ, ಡಾ. ಬಿ.ಜಗದೀಶ್​ ಶೆಟ್ಟಿ, ಡಾ.ಅರುಣಕುಮಾರ್​ ಎಸ್​.ಆರ್​. ಇದ್ದರು. 
ಉಡುಪಿ

ಪರಂಪರೆಯ ಅರಿವಿನಿಂದ ಸಮಗ್ರ ದೇಶ ನಿರ್ಮಾಣ

* ಹಿರಿಯ ಸಾಹಿತಿ ಡಾ. ಬಿ.ಎ. ವಿವೇಕ್​ ರೈ ಅಭಿಮತ

* ಕು.ಶಿ. ಭಟ್​, ಡಾ. ಉಪಾಧ್ಯಾಯ ಜಾನಪದ ಪ್ರಶಸ್ತಿ ಪ್ರದಾನ

ಉಡುಪಿ: ಮಾತೃಭಾಷೆ, ದೇಶದ ಸಂಸ್ಕೃತಿ, ಆಚರಣೆಯ ಜ್ಞಾನವೇ ಇಲ್ಲದಿದ್ದರೆ ಕೋಟಿ, ಟ್ರಿಲಿಯನ್​ಗಳಷ್ಟು ಹಣವಿದ್ದರೂ ಪ್ರಯೋಜನವಿಲ್ಲ. ಧನದಿಂದ ಎಲ್ಲವನ್ನೂ ಸಾಧಿಸಲಾಗದು. ವಿದ್ವತ್​ ಪರಂಪರೆ ಕ್ಷೀಣಿಸತೊಡಗಿದ್ದು, ಹೊಸ ಪರಂಪರೆ ಜೋಡಿಸಬೇಕಾದ ಅಗತ್ಯತೆ ಇದೆ. ತಿಳಿವಳಿಕೆಗೆ ಕೊನೆಯೆಂಬುದಿಲ್ಲ. ಪರಂಪರೆಯ ಅರಿವು, ಅನುಭವ ಇದ್ದಾಗ ಮಾತ್ರ ಸುಸ್ಥಿರ ಸಮಾಜ, ಸಮಗ್ರ ದೇಶ ಕಟ್ಟಲು ಸಾಧ್ಯ ಎಂದು ಹಿರಿಯ ಸಾಹಿತಿ ಡಾ. ಬಿ.ಎ. ವಿವೇಕ್​ ರೈ ಹೇಳಿದರು.
ಉಡುಪಿಯ ಎಂಜಿಎಂ ಕಾಲೇಜ್​ನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಷನ್​ ವತಿಯಿಂದ, ಆಶಾ ಮತ್ತು ಅಶೋಕ್​ ಕುತ್ಯಾರ್​ ಪ್ರಾಯೋಜಕತ್ವದಲ್ಲಿ ಶನಿವಾರ (ಸೆ.12) ಆಯೋಜಿಸಿದ್ದ ಕು.ಶಿ. ಹರಿದಾಸ್​ ಭಟ್​ ಜಾನಪದ ಪ್ರಶಸ್ತಿ ಹಾಗೂ ಡಾ.ಯು.ಪಿ. ಉಪಾಧ್ಯಾಯ, ಡಾ. ಸುಶೀಲಾ ಪಿ. ಉಪಾಧ್ಯಾಯ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಪ್ರಶಸ್ತಿ ಪ್ರದಾನ
ಬಸ್ರೂರಿನ ಜಾನಪದ ತಜ್ಞ ಡಾ. ಕನರಾಡಿ ವಾದಿರಾಜ್​ ಭಟ್​ ಅವರಿಗೆ ಕು.ಶಿ. ಹರಿದಾಸ್​ ಭಟ್​ ಪ್ರಶಸ್ತಿ ಹಾಗೂ ಭಾಷಾ ತಂತ್ರಾಂಶ ತಜ್ಞ ನಾಡೋಜ ಪ್ರೊ. ಕೆ.ಪಿ. ರಾವ್​ ಅವರಿಗೆ ಡಾ ಯು.ಪಿ. ಉಪಾಧ್ಯಾಯ, ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿ ವಿತರಿಸಲಾಯಿತು. ಯಕ್ಷಗಾನದ ಹಿರಿಯ ವಿದ್ವಾಂಸ ಡಾ. ಕೆ.ರಾಘವ ನಂಬಿಯಾರ್​, ಬಸ್ರೂರು ಶಾರದಾ ಕಾಲೇಜ್​ನ ನಿವೃತ್ತ ಪ್ರಾಂಶುಪಾಲೆ ಡಾ. ಚಂದ್ರಾವತಿ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.
"

ಕನ್ನಡಕ್ಕಿಂತ ತುಳು ಹೆಚ್ಚು ಸ್ವರವಂತ ಭಾಷೆಯಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಕಲಿಕೆಯ ಆಸಕ್ತಿಯಿದ್ದರೆ ಯಾರು ಬೇಕಾದರೂ ಸಾಧನೆ ಮಾಡಬಹುದು. ಎಲ್ಲವನ್ನೂ ಚಿಕಿತ್ಸಕ ಬುದ್ಧಿ, ವಿವೇಕದಿಂದ ನೋಡುವ ಗುಣ ಬೆಳೆಸಿಕೊಳ್ಳಬೇಕು. ಕಲಿಸಿದ ಗುರುಗಳನ್ನು ಎಂದಿಗೂ ಮರೆಯಕೂಡದು.

ಎಂಜಿಎಂ ಕಾಲೇಜ್​ನ ಪ್ರಾಂಶುಪಾಲೆ ಡಾ.ಗಾಯತ್ರಿ ಪೈ ಉಪಸ್ಥಿತರಿದ್ದರು. ಗುರು ಉಮೇಶ್​ ಸುವರ್ಣ ಪ್ರಾರ್ಥಿಸಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್​ ಶೆಟ್ಟಿ ಸ್ವಾಗತಿಸಿದರು. ಆರ್​ಆರ್​ಸಿಯ ಸಹ ಸಂಶೋಧಕ ಡಾ.ಅರುಣಕುಮಾರ್​ ಎಸ್​.ಆರ್​. ಕಾರ್ಯಕ್ರಮ ನಿರ್ವಹಿಸಿದರು.
"

ಇತ್ತೀಚೆಗಿನ ವರ್ಷಗಳಲ್ಲಿ ಸಂಶೋಧಕರು, ತಜ್ಞರು ಯಾರು ಎನ್ನುವ ಪ್ರಶ್ನೆ ಮೂಡುತ್ತಿದೆ. ಕು.ಶಿ. ಹೆಸರಲ್ಲಿ ಜಾನಪದ ಗ್ರಂಥ ಪ್ರಕಟಣೆಗೆ ಪ್ರಶಸ್ತಿಯ ಮೊತ್ತ ಬಳಕೆಗೆ ನೀಡಲಾಗುವುದು. ಗ್ರಾಮೀಣ ಭಾಗದಲ್ಲಿ ಈಗಲೂ ಇರುವ ಜನಪದರ ವಿದ್ವತ್​ ಗುರುತಿಸಬೇಕು. ಅವರ ಬಳಿ ಜಾನಪದದ ಅಪಾರ ಜ್ಞಾನದ ಗಣಿಯಿದೆ.