ಆದಿಉಡುಪಿಯಲ್ಲಿ ವೆಲಂಕಣಿ ಆರೋಗ್ಯ ಮಾತೆ ಮೂರ್ತಿಯ ಮೆರವಣಿಗೆಗೆ ಫ್ರಾಂಕ್ಲಿನ್ ಡಿಸೋಜಾ ಚಾಲನೆ ನೀಡಿದರು. ಬ್ಯಾಪ್ಟಿಸ್ಟ್ ಮಿನೇಜಸ್, ನವೀನ್ ಫೆರ್ನಾಂಡಿಸ್, ಪ್ರೆಸಿಲ್ಲಾ ಆಳ್ವಾ, ಡೆನಿಸ್ ಲಸ್ರಾದೊ ಇತರರಿದ್ದರು.
* ಶಿವಮೊಗ್ಗದ ಧರ್ಮಗುರು ಫ್ರಾಂಕ್ಲಿನ್ ಡಿಸೋಜಾ ಅಭಿಮತ
* ಪ್ರತಿಷ್ಠಾಪನಾ ಮಹೋತ್ಸವ, ಮೂರ್ತಿಯ ಮೆರವಣಿಗೆ
ಉಡುಪಿ: ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಚರ್ಚ್ಗಳ ಪಾಲಕರ ಮಂಜೂಶಾ (ಮೂರ್ತಿ)ಗಳನ್ನು ಸಾರ್ವಜನಿಕವಾಗಿ ಮೆರವಣಿಗೆ ನಡೆಸಲಾಗುತ್ತದೆ. ಈ ರೀತಿ ಗೌರವ ಸೂಚಿಸುವುದು ಕೆಸ್ತ ಸಂಪ್ರದಾಯವಾಗಿದೆ. ವೆಲಂಕಣಿ ಆರೋಗ್ಯ ಮಾತೆಯು ಶ್ರೇಷ್ಠ ಪವಾಡಗಳ ಮಾತೆ ಎಂದು ಜನಜನಿತವಾಗಿದೆ. ಆಕೆಯ ಮೂಲಕ ಯೇಸು ಕ್ರಿಸ್ತರ ಕ್ರಪಾವರಗಳು ಸಮುದಾಯದ ಎಲ್ಲರಿಗೂ ಲಭಿಸಲಿ ಎಂದು ಶಿವಮೊಗ್ಗ ಪ್ರಾಂತ್ಯದ ಧರ್ಮಗುರು ವಂ.ಫ್ರಾಂಕ್ಲಿನ್ ಡಿಸೋಜಾ ಆಶಿಸಿದರು.
ಉಡುಪಿಯ ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ದೇವಾಲಯದ ವೆಲಂಕಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವದ ನಿಮಿತ್ತ ಗುರುವಾರ (ಆ.13) ಆಯೋಜಿಸಿದ್ದ ವೆಲಂಕಣಿ ಮಾತೆ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಮೆರವಣಿಗೆಯು ಆದಿಉಡುಪಿ ಮಾರ್ಗವಾಗಿ ಆರಂಭಗೊಂಡು ಚರ್ಚ್ನವರೆಗೆ ನಡೆಯಿತು. ತದನಂತರ ಫ್ರಾಂಕ್ಲಿನ್ ಡಿಸೋಜಾ ಬಲಿಪೂಜೆ ನೆರವೇರಿಸಿದರು.
ಪುಣ್ಯಕ್ಷೇತ್ರದ ರೆಕ್ಟರ್ ವಂ. ಬ್ಯಾಪ್ಟಿಸ್ಟ್ ಮಿನೇಜಸ್, ಚರ್ಚ್ನ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಫೆರ್ನಾಂಡಿಸ್, ಕಾರ್ಯದರ್ಶಿ ಪ್ರೆಸಿಲ್ಲಾ ಆಳ್ವಾ, ಆಯೋಗಗಳ ಸಂಯೋಜಕ ಡೆನಿಸ್ ಲಸ್ರಾದೊ ಹಾಗೂ ಚರ್ಚ್ನ ಮಹೋತ್ಸವ ಆಚರಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ವೆಲಂಕಣಿ ಮಾತೆಯ ವಾರ್ಷಿಕ ಮಹೋತ್ಸವ ಆ.15ರಂದು ನಡೆಯಲಿದ್ದು, ಬೆಳಗ್ಗೆ 10:30ಕ್ಕೆ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಅತಿ ವಂ. ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹಬ್ಬದ ಬಲಿಪೂಜೆ ನೆರೆವೇರಿಸಲಿದ್ದಾರೆ.