ಉಡುಪಿ ಶ್ರೀಕೃಷ್ಣನಿಗೆ ದಾನಿ ಎಸ್​.ಲಕ್ಷ್ಮೀನಾರಾಯಣನ್​ ಅವರು ಕೊಡುಗೆಯಾಗಿ ನೀಡಿದ ಸ್ವರ್ಣ ಭಗವದ್ಗೀತಾ ಗ್ರಂಥವನ್ನು ಪಾರ್ಥ ಸಾರಥಿ ಸುವರ್ಣ ರಥದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ಸುಗುಣೇಂದ್ರ ಶ್ರೀ, ಸುಶ್ರೀಂದ್ರ ಶ್ರೀ, ದಾನಿಗಳಾದ ಎಸ್​.ಲಕ್ಷ್ಮೀನಾರಾಯಣನ್​, ನಾಗರಾಜ್​ ಆಚಾರ್ಯ, ಪ್ರಸನ್ನ ಆಚಾರ್ಯ ಇತರರಿದ್ದರು. 
ಉಡುಪಿ

ಹೊನ್ನಿನ ಭಗವದ್ಗೀತಾ ಹೊತ್ತಗೆಯ ಮೆರವಣಿಗೆ

* ಪಾರ್ಥ ಸಾರಥಿ ಸುವರ್ಣ ರಥದಲ್ಲಿ ಕಂಗೊಳಿಸಿದ ಗೀತೆ

ಉಡುಪಿ: ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ "ವಿಶ್ವ ಗೀತಾ' ಪರ್ಯಾಯದ ಬಹುವಿಧ ಕಾರ್ಯಕ್ರಮಗಳಿಗೆ ಶಿಖರಪ್ರಾಯವಾಗಿ ಶ್ರೀಕೃಷ್ಣನಿಗೆ 'ಹೊನ್ನಿನ ಭಗವದ್ಗೀತಾ ಹೊತ್ತಗೆ' ಸಮರ್ಪಣೆ ಕಾರ್ಯಕ್ರಮ ಉಡುಪಿಯಲ್ಲಿ ಗುರುವಾರ (ಜ.8) ಸಂಜೆ ನಡೆಯಿತು.
ನವದೆಹಲಿಯ ನಿವಾಸಿ, ಶ್ರೀಕೃಷ್ಣನ ಭಕ್ತರಾದ ಕೇಂದ್ರ ಗೃಹ ಖಾತೆಯ ನಿವೃತ್ತ ಕಾರ್ಯದರ್ಶಿ ಎಸ್​.ಲಕ್ಷ್ಮೀನಾರಾಯಣನ್​ ಅವರು ಅಂದಾಜು 2 ಕೋ.ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ ಸುವರ್ಣ ಭಗವದ್ಗೀತಾ ಗ್ರಂಥವನ್ನು ಸುಗುಣೇಂದ್ರ ಶ್ರೀಗಳು ಭಗವಂತನಿಗೆ ಸಮರ್ಪಿಸಿದರು.
ಗ್ರಂಥ ಸಮರ್ಪಣೆಯ ನಿಮಿತ್ತ ಗೀತಾಮಂದಿರದಿಂದ ಮೆರವಣಿಗೆಯಲ್ಲಿ ತೆರಳಿ ರಥಬೀದಿಯಲ್ಲಿ ಶ್ರೀಕೃಷ್ಣ ಮಠದ ಮುಂಭಾಗದಲ್ಲಿ ಪುತ್ತಿಗೆ ಯತಿದ್ವಯರು ಪೂಜೆ ಸಲ್ಲಿಸಿ. ಮಹಾಮಂಗಳರಾತಿ ಮಾಡಿದರು. ಇದಕ್ಕೂ ಮೊದಲು ಶ್ರೀಕೃಷ್ಣ ಮಠದ ತೀರ್ಥ ಮಂಟಪದಲ್ಲಿ ಸುವರ್ಣ ಗೀತಾ ಗ್ರಂಥಕ್ಕೆ ಆರತಿ ಬೆಳಗಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಾರ್ಥ ಸಾರಥಿ ಸುವರ್ಣ ರಥದಲ್ಲಿ ರಥಬೀದಿಯ ಒಂದುಸುತ್ತು ಪ್ರದಣಾ ಮೆರವಣಿಗೆ ನಡೆಸಿ, ರಾಜಾಂಗಣಕ್ಕೆ ತರಲಾಯಿತು. ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಹಾಗೂ ಮಠದ ನೂರಾರು ಸದ್ಭಕ್ತರು ಉಪಸ್ಥಿತರಿದ್ದರು.

ಚಿನ್ನದ 70 ಹಾಳೆಯಿರುವ ಪುಸ್ತಕ !

ಸ್ವರ್ಣಮಯವಾಗಿರುವ ಈ ಭಗವದ್ಗೀತಾ ಪುಸ್ತಕದ 1 ಪುಟದಲ್ಲಿ 5 ಶ್ಲೋಕಗಳಂತೆ 18 ಅಧ್ಯಾಯದ ಒಟ್ಟು 700 ಶ್ಲೋಕಗಳಿದ್ದು, ಚಿನ್ನದ ಹಾಳೆಯಲ್ಲಿ ಅಂದವಾಗಿ ಅಚ್ಚೊತ್ತಲಾಗಿದೆ. ರಥಬೀದಿಯಲ್ಲಿ ಪಾರ್ಥ ಸಾರಥಿ ಸುವರ್ಣ ರಥದಲ್ಲಿ ಸುವರ್ಣ ಗೀತಾ ಗ್ರಂಥವನ್ನಿಟ್ಟು, ಮಲ್ಲಿಗೆ ಹೂವಿನಿಂದ ಅದನ್ನು ಅಲಂಕರಿಸಿ ಪೂಜೆ ಮಾಡಲಾಯಿತು. ನವಿಲು ಗರಿಯಿಂದ ಶೋಭಿಸುತ್ತಿದ್ದ ಸುವರ್ಣ ಗೀತಾ ಗ್ರಂಥವಿದ್ದ ರಥವನ್ನು ಎಳೆಯುತ್ತ 'ಗೋವಿಂದಾನಿ ಗೋವಿಂದಾ' ಎನ್ನುತ್ತ ಭಕ್ತರು ರಥಬೀದಿಯಲ್ಲಿ ಮೆರವಣಿಗೆ ನಡೆಸಿದರು.