ಪ್ರಜಾಸೇವೆ ಆಂದೋಲನದಲ್ಲಿ ಶಾಸಕ ಭರತ್ ಶೆಟ್ಟಿ ಅರ್ಜಿ ಸ್ವೀಕರಿಸಿದರು. ತಹಸೀಲ್ದಾರ್ ರಮೇಶ್ ಬಾಬು, ಮಂಗಳೂರು ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಮತ್ತಿತರರಿದ್ದರು.
ಗುರುಪುರ: ಹಿಂದೆ ಸಾರ್ವಜನಿಕರ ಕುಂದು-ಕೊರತೆಗಳ ಆಲಿಕೆಗೆ ಜನಸ್ಪಂದನ ಕಾರ್ಯಕ್ರಮವಿತ್ತು. ಅದೀಗ ಪ್ರಜಾಸೇವೆಯಾಗಿ ಮಾರ್ಪಟ್ಟಿದೆ. ಈ ಸಭೆ ಮೂಲಕ ಇಲಾಖಾ ಮಟ್ಟದಲ್ಲಿ ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಪರಿಹಾರಕ್ಕೆ ಸ್ವಲ್ಪ ಪ್ರಯೋಜನವಾಗಲಿದೆ. ಪ್ರಜಾಸೇವೆ ವೆಬ್‌ಸೈಟ್ ತೆರೆಯಲಾಗಿದ್ದು, ಆನ್‌ಲೈನ್ ಮೂಲಕ ಸಾರ್ವಜನಿಕರು ತಮ್ಮ ಅರ್ಜಿಗಳು ಅಥವಾ ಮನವಿಗಳು ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಗುರುಪುರ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಪ್ರಥಮ ಸಭೆಯನ್ನು ಕಂದಾವರ ಕಿನ್ನಿಕಂಬಳದಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ತಹಸೀಲ್ದಾರ್ ರಮೇಶ್ ಬಾಬು ಮಾತನಾಡಿ, ತಿಂಗಳ ಎಲ್ಲ ಶನಿವಾರ ಹೋಬಳಿ ಅಥವಾ ತಾಲೂಕು ಮಟ್ಟದಲ್ಲಿ ಪ್ರಜಾಸೇವೆ ಸಭೆ ನಡೆಯಲಿದೆ. 1 ಮತ್ತು 3ನೇ ಶನಿವಾರ ಉಸ್ತುವಾರಿ ಹಾಗೂ ಶಾಸಕರ ಉಪಸ್ಥಿತಿಯಲ್ಲಿ, 2ಮತ್ತು 4ನೇ ಶನಿವಾರ ತಾಲೂಕುಮಟ್ಟದಲ್ಲಿ ಹಾಗೂ ಹೋಬಳಿ ಮಟ್ಟದ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಪ್ರಜಾಸೇವೆ ಸಭೆ ನಡೆಯಲಿದೆ ಎಂದರು.
ಮಂಗಳೂರು ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ಪಿಡಬ್ಲೃಡಿ ಎಇಇ ಪ್ರೀತಂ, ತಾಲೂಕು ಆರೋಗ್ಯ ಅಧಿಕಾರಿ ಡಾ.ಸುಜಯ್ ಭಂಡಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ಶೈಲಾ ಕಾರಗಿ, ಸಮಾಜ ಕಲ್ಯಾಣಾಧಿಕಾರಿ ಸುದೇಶ್, ಪಶು ಇಲಾಖೆಯ ವೈದ್ಯಾಧಿಕಾರಿ ಡಾ.ಅಶೋಕ್ ಕುಮಾರ್, ಕೃಷಿ ಇಲಾಖೆ ಇ.ಡಿ. ವೀಣಾ ಉಪಸ್ಥಿತರಿದ್ದರು. ಗುರುಪುರ ಹೋಬಳಿ ಗ್ರಾಮಸೇವಕ ಗಂಗಾಧರ ದೇವಾಡಿಗ ನಿರೂಪಿಸಿದರು.
ರಾಶಿಗಟ್ಟಲೆ ಅಹವಾಲು
ಗುರುಪುರ ಹೋಬಳಿ ಮಟ್ಟದ ನೂರಾರು ಮಂದಿ ತಮ್ಮ ಸಮಸ್ಯೆಗಳ ಬಗ್ಗೆ ಲಿಖಿತ ಮನವಿ ನೀಡಿದರು. ಬಹುತೇಕ ಮಹಿಳೆಯರು ಗೃಹಲಕ್ಷ್ಮೀ, ಪಿಂಚಣಿ, ಬಿಪಿಎಲ್ ಕಾರ್ಡ್, ರಸ್ತೆ ಸಮಸ್ಯೆಗಳ ಬಗ್ಗೆ ದೂರರ್ಜಿ ಸಲ್ಲಿಸಿದರು. ಗ್ರಾಮೀಣ ಪ್ರದೇಶಕ್ಕೆ ಗಂಭೀರ ಸಮಸ್ಯೆಯಾಗಿರುವ 9/11, ಮನೆ ಲೈಸೆನ್ಸ್‌ಗಳ ಬಗ್ಗೆ ದೂರು ನೀಡಿದ ಗ್ರಾಮೀಣ ಜನರು ಇದನ್ನೆಲ್ಲ ಹಿಂದಿನಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ತರಬೇಕೆಂದು ಮನವಿ ಮಾಡಿಕೊಂಡರು. ಮೆಸ್ಕಾಂ, ಪೊಲೀಸ್, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಂದಾಯ ಮತ್ತಿತರ ಇಲಾಖೆಗಳ ಅಧಿಕಾರಿಗಳು ಗ್ರಾಮೀಣ ಜನರ ಸಮಸ್ಯೆಗಳಿಗೆ ಸಂಬಂಧಪಟ್ಟ ಮನವಿ, ಅರ್ಜಿ ಸ್ವೀಕರಿಸಿ ಪರಿಹಾರದ ಭರವಸೆ ನೀಡಿದರು.