ಬೈಂದೂರು- ಕುಂದಾಪುರ ಹೆದ್ದಾರಿಯ ಪ್ರಮುಖ ಸಂಪರ್ಕ ಕೇಂದ್ರವಾಗಿರುವ ತ್ರಾಸಿ ಜಂಕ್ಷನ್. 
ಉಡುಪಿ

ತ್ರಾಸಿ ಜಂಕ್ಷನ್‌ನಲ್ಲಿ ತಾಪತ್ರಯ!

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಬೈಂದೂರು- ಕುಂದಾಪುರ ಹೆದ್ದಾರಿಯ ಪ್ರಮುಖ ಸಂಪರ್ಕ ಕೇಂದ್ರವಾಗಿರುವ ತ್ರಾಸಿ ಜಂಕ್ಷನ್‌ನಲ್ಲಿ ಮೂಲಸೌಕರ್ಯದ ಕೊರತೆ ಈಗ ಗಂಭೀರ ಸಮಸ್ಯೆಯಾಗಿ ತಲೆದೋರಿದೆ. ದಿನವೂ ಸಾವಿರಾರು ಮಂದಿ ಸಂಚರಿಸುವ ಈ ಜಂಕ್ಷನ್‌ನಲ್ಲಿ ಸಾರ್ವಜನಿಕ ಶೌಚಗೃಹವಿಲ್ಲದಿರುವುದು ಪ್ರಯಾಣಿಕರು ಮತ್ತು ಸ್ಥಳೀಯರ ಸಂಕಷ್ಟಕ್ಕೆ ಕಾರಣವಾಗಿದೆ.
ಒಂದೆಡೆ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚ್ ಮೂಲಕ ಬೈಂದೂರು ತೆರಳುವ ಮಾರ್ಗ, ಮತ್ತೊಂದೆಡೆ ಕುಂದಾಪುರ, ಗಂಗೊಳ್ಳಿ, ಪಡುಕೋಣೆ ಸೇರಿದಂತೆ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರವಾಗಿರುವ ಈ ಜಂಕ್ಷನ್‌ನಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ನಿತ್ಯ ಸಾವಿರಾರು ಜನರು ಸಂಚರಿಸುವ ಈ ಪ್ರದೇಶದಲ್ಲಿ ಶೌಚಗೃಹ ವ್ಯವಸ್ಥೆಯೇ ಇಲ್ಲದಿರುವುದು ದುರದೃಷ್ಟಕರ.
ಮಕ್ಕಳು, ಮಹಿಳೆಯರು, ವಯೋವೃದ್ಧರು, ಮಳಿಗೆಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರು, ರಿಕ್ಷಾ, ಟೆಂಪೋ ಹಾಗೂ ಕಾರು ಚಾಲಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅನಿವಾರ್ಯವಾಗಿ ಹೋಟೆಲ್, ಪೆಟ್ರೋಲ್ ಬಂಕ್‌ಗಳು ಅಥವಾ ಸುತ್ತಮುತ್ತಲಿನ ಮನೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

ಸಿಸಿ ಕ್ಯಾಮರಾ ಕಣ್ಮರೆ

ಸುರಕ್ಷತೆ ದೃಷ್ಟಿಯಿಂದ ಬಸ್ ನಿಲ್ದಾಣದ ಬದಿಯಲ್ಲಿ ಕಂಬದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಒಂದು ವರ್ಷದಿಂದ ಅದು ಕಣ್ಮರೆಯಾಗಿದ್ದು, ಜಂಕ್ಷನ್‌ನಲ್ಲಿ ಅಹಿತಕರ ಟನೆಗಳು ನಡೆದರೆ ಯಾರು ಹೊಣೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕೂಡಲೇ ಸ್ಥಳೀಯಾಡಳಿತ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಬೇಕು.
*ಜನಸಂಖ್ಯೆಗೆ ತಕ್ಕಂತೆ ಸುಸಜ್ಜಿತ ಬಸ್ ನಿಲ್ದಾಣವಿಲ್ಲ
*ಕುಡಿಯುವ ನೀರಿನ ಸೌಕರ್ಯವಿಲ್ಲ
*ಜಂಕ್ಷನ್ ಸುತ್ತಮುತ್ತ ತ್ಯಾಜ್ಯ ಸಮಸ್ಯೆ
*ವ್ಯವಸ್ಥಿತ ರಿಕ್ಷಾ ನಿಲ್ದಾಣವಿಲ್ಲದೆ, ರಿಕ್ಷಾ ಚಾಲಕರ ಪರದಾಟ
*ಸಾರ್ವಜನಿಕ ಸ್ಥಳದಲ್ಲಿ ಗುಟ್ಕಾ ಉಗಿತ, ಸಿಗರೇಟ್ ಸೇವನೆ

ಸಮಸ್ಯೆ ಕುರಿತು ಹಲವು ಬಾರಿ ಸ್ಥಳಿಯಾಡಳಿತದ ಗಮನಕ್ಕೆ ತರಲಾಗಿದ್ದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಇಲ್ಲಿನ ಮಳಿಗೆಗೆಳಲ್ಲಿ ಕೆಲಸ ಮಾಡುವ ಮಹಿಳೆಯರು ಹಾಗೂ ವಯಸ್ಸಾದವರ ಸಮಸ್ಯೆಯನ್ನು ಮನಗಂಡು ಕೂಡಲೇ ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕು.

— ಮಾರ್ಕ್ ಡಿಅಲ್ಮೇಡಾ ರಿಕ್ಷಾ ಚಾಲಕ, ತ್ರಾಸಿ ಜಂಕ್ಷನ್