ಕುಂದಾಪುರದ ಜ್ಯೂನಿಯರ್ ಕಾಲೇಜು ಹತ್ತಿರದ ಕಾಂಗ್ರೆಸ್ ಪಕ್ಷದ ನಿವೇಶನದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನೆಯನ್ನು ಸಚಿವ ಬೋಸರಾಜು ನೆರವೇರಿಸಿದರು. ಪ್ರಮುಖರಾದ ಮಂಜುನಾಥ ಭಂಡಾರಿ, ಕೆ.ಜಯಪ್ರಕಾಶ ಹೆಗ್ಡೆ, ದಿನೇಶ್ ಹೆಗ್ಡೆ ಮೊದಲಾದವರಿದ್ದರು.
- ಎನ್.ಎಸ್.ಭೋಸರಾಜು ಮಾಹಿತಿ
- ಕುಂದಾಪುರ ಬ್ಲಾಕ್ ನೂತನ ಕಚೇರಿಗೆ ಶಂಕುಸ್ಥಾಪನೆ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ರಾಜ್ಯದಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಪ್ರಾರಂಭಿಸಿಲು ಕಾನೂನು ಪ್ರಕಾರ ಜಾಗ ಪಡೆಯುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ಸಿಕ್ಕಿದ ಸ್ವಲ್ಪ ಸಮಯದಲ್ಲೇ ಇಡೀ ರಾಜ್ಯದಲ್ಲಿರುವ ಜಾಗಗಳನ್ನು ಅತಿಕ್ರಮಣ ಮಾಡಿಕೊಂಡಿವೆ. ಆರೆಸ್ಸೆಸ್ ಹಾಗೂ ಅದರ ಅಂಗಸಂಸ್ಥೆಗಳಿಗೆ ನೂರಾರು ಎಕರೆ ಜಾಗ ನೀಡಿ ಅವರಿಗೆ ಅನುಕೂಲ ಮಾಡಿಕೊಟ್ಟಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕೆಂಬ ಪ್ರಯತ್ನ ಇತ್ತು. ಕಾಂಗ್ರೆಸ್ ಬಗ್ಗೆ ಅವರಿಗೆ ಭಯ ಇದೆ. ಪಾರ್ಲಿಮೆಂಟ್ನಲ್ಲಿ 400 ಸೀಟ್ ಪಡೆದುಕೊಂಡ ಬಿಜೆಪಿ 200ಕ್ಕೆ ಇಳಿದಿದೆ. ಕಾಂಗ್ರೆಸ್ ಪಕ್ಷಕ್ಕೆ ಬೆಳೆಯುವ, ಜನರ ಪ್ರೀತಿ, ವಿಶ್ವಾಸ ಗಳಿಸುವ ಅವಕಾಶ ಇದೆ ಎಂದು ಸಣ್ಣ ನೀರಾವರಿ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಹೇಳಿದರು.
ಕುಂದಾಪುರದ ಜೂನಿಯರ್ ಕಾಲೇಜು ಹತ್ತಿರದ ಕಾಂಗ್ರೆಸ್ ಪಕ್ಷದ ನಿವೇಶನದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನೆ ಬುಧವಾರ ನೆರವೇರಿಸಿ ಮಾತನಾಡಿದರು.
ಚುನಾವಣೆಗೂ ಮುನ್ನ ದೇಶ ಸಮೃದ್ಧಿಯಾಗಿದೆ ಎಂದು ಹೇಳುವ ಪ್ರಧಾನ ಮಂತ್ರಿಗಳು, ಚುನಾವಣೆ ಮುಗಿದ ಬಳಿಕ ಉಳಿತಾಯ ಬಗ್ಗೆ ಮಾತನಾಡುತ್ತಾರೆ. ಮಹಿಳೆಯರಿಗೆ 2013ರಲ್ಲಿ ಶೇ.50 ಮೀಸಲಾತಿ ನೀಡುವ ಬಿಲ್ ಮಂಡಿಸಲಾಗಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಕಾಂಗ್ರೆಸ್ ಪಕ್ಷ ಹೆಚ್ಚಿನ ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಿದೆ. ಬಿಜೆಪಿ ಪ್ರತಿಯೊಂದರಲ್ಲಿ ರಾಜಕಾರಣ ಮಾಡುತ್ತಿದ್ದು, ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಕೆ.ಜಯಪ್ರಕಾಶ ಹೆಗ್ಡೆ, ಮುಖಂಡ ದಿನೇಶ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಎ.ಗಫೂರ್, ಮುಖಂಡರಾದ ದೇವಕಿ ಸಣ್ಣಯ್ಯ, ಕಿಶನ್ ಹೆಗ್ಡೆ, ರಾಜು ಪೂಜಾರಿ, ಶಿವರಾಮ ಶೆಟ್ಟಿ, ಶಂಕರ ಕುಂದರ, ಉದಯ ಕುಮಾರ್ ಶೆಟ್ಟಿ, ಜ್ಯೋತಿ ಹೆಬ್ಬಾರ್, ವಿನೋದ ಕ್ರಾಸ್ಟೊ, ಹರೀಶ ಕಿಣಿ, ಬಿ.ಹಿರಿಯಣ್ಣ, ಸದಾನಂದ ಶೆಟ್ಟಿ, ಸತೀಶ ಕಿಣಿ, ಮುಸ್ತಾಕ್ ಅಹಮ್ಮದ್, ವಿಕಾಸ್ ಹೆಗ್ಡೆ, ಕೃಷ್ಣದೇವ ಕಾರಂತ, ಪ್ರಸನ್ನ ಕುಮಾರ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಹರಿಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು.
"
ಸ್ಥಳಿಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ವಿಳಂಬ ಆಗುತ್ತಿರುವ ಬಗ್ಗೆ ಪಂಚಾಯತ್ ರಾಜ್ ಸಚಿವರು ಸಭೆ ನಡೆಸಿದ್ದು, 2&3 ತಿಂಗಳಿನಲ್ಲಿ ಸ್ಥಳಿಯಾಡಳಿತ ಸಂಸ್ಥೆಗಳ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಮೀಸಲಾತಿ ಬಗ್ಗೆ ಪ್ರಯತ್ನ ಮುಂದುವರಿದಿದೆ. ಐಎಸ್ಆರ್ ಮುಖಾಂತರ ತೊಂದರೆ ಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದ್ದು, ಈ ಬಗ್ಗೆ ಎಚ್ಚರದಿಂದರಬೇಕು. ಈ ಬಗ್ಗೆ ಡಿಸಿಗೆ ಜವಾಬ್ದಾರಿಯುತವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದು, ಎಲ್ಲ ಕಾರ್ಯಕರ್ತರು ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ.
— ಎನ್.ಎಸ್.ಭೋಸರಾಜು, ಸಚಿವ