ಹುಲಿವೇಷ ಸ್ಪರ್ಧೆಯಲ್ಲಿ ಬೈಲೂರು ಇಷ್ಟ ಮಹಾಲಿಂಗೇಶ್ವರ ತಂಡ 1 ಲಕ್ಷ ರೂ. ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನ ಪಡೆದಿದೆ.  
ಉಡುಪಿ

ಕೃಷ್ಣನ ಸಾಮಾಜಿಕ ನ್ಯಾಯ ಸದಾ ಪ್ರಸ್ತುತ: ನ್ಯಾ. ಶ್ರೀಶಾನಂದ

ಗೋಪಾಲಕೃಷ್ಣ ಪಾದೂರ್
ಉಡುಪಿ: ದ್ರೌಪದಿಯ ರಕ್ಷಣೆ, ಸುದಾಮನ ಗೆಳೆತನ, ವಿದುರನ ಸ್ನೇಹ, ಗೋವರ್ಧನಗಿರಿ ಧಾರಣೆ ಪ್ರಸಂಗಗಳು ಕೃಷ್ಣನ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಅತ್ಯುನ್ನತ ನಿದರ್ಶನಗಳಾಗಿದ್ದು, ಸಾವಿರ ವರ್ಷ ಸಂದರೂ ಈ ತತ್ವಗಳು ಪ್ರಸ್ತುತವಾಗಿರುತ್ತವೆ ಎಂದು ಹೈಕೋರ್ಟ್​ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.

ಕೃಷ್ಣಮಠದಲ್ಲಿ ಪರ್ಯಾಯ ಶೀರೂರು ಮಠದ ಆಶ್ರಯದಲ್ಲಿ ನಡೆದ ಕೃಷ್ಣಾಷ್ಟಮಿ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಮನುಷ್ಯನ ಅಹಂಕಾರ ಹೋಗುವ ತನಕ ದೇವರ ಸಾಕ್ಷಾತ್ಕಾರ ಸಾಧ್ಯವಿಲ್ಲ. ದೇವರನ್ನು ಒಲಿಸಿಕೊಳ್ಳುವ ಏಕೈಕ ಮಾರ್ಗ ಭಕ್ತಿ. ಇದಲ್ಲಿದ್ದರೆ ಎಲ್ಲಾ ಪೂಜೆಯೂ ವ್ಯರ್ಥವಾಗುತ್ತದೆ. ತಪು$್ಪ ಯಾರೇ ಮಾಡಿದರೂ ಅದನ್ನು ವಿರೋಧಿಸುವ ಛಾತಿ ಕೃಷ್ಣನದ್ದಾಗಿದ್ದು, ದುಷ್ಟಜನರ ಶಿಸಲು ಬಲಪ್ರಯೋಗವೂ ಬೇಕು ಎಂಬ ಸಂದೇಶ ಭಗವದ್ಗೀತೆಯಲ್ಲಿ ನೀಡಿದ್ದಾನೆ. ಕೃಷ್ಣ ಎಂದಿಗೂ ಸತ್ಯದ ಪರ ಮತ್ತು ನ್ಯಾಯದ ಪರವಾಗಿ ಕಾರ್ಯನಿರ್ವಹಿಸಿದ್ದಾನೆ. ಕೃಷ್ಣನ ಭಕ್ತಿಯಲ್ಲಿ ಸಮಾನತೆ ಕಾಣಬಹುದು ಎಂದು ಅವರು ಹೇಳಿದರು.

ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಶೀರೂರು ಮಠದ ದಿವಾನ್​ ಉದಯಕುಮಾರ್​ ಸರಳತ್ತಾಯ ಉಪಸ್ಥಿತರಿದ್ದರು. ವಿಷ್ಣು ಪಾಡಿಗಾರ್​ ಕಾರ್ಯಕ್ರಮ ನಿರೂಪಿಸಿದರು.

ಹುಲಿವೇಷ ಸ್ಪರ್ಧೆ ವಿಜೇತರು
ಈ ಬಾರಿ 2 ದಿನ ರಾಜಾಂಗಣದಲ್ಲಿ ನಡೆದ ಹುಲಿವೇಷ ಸ್ಪರ್ಧೆಯಲ್ಲಿ ಬೈಲೂರು ಇಷ್ಟ ಮಹಾಲಿಂಗೇಶ್ವರ ತಂಡ 1 ಲಕ್ಷ ರೂ. ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ದ್ವೀತಿಯ ಸ್ಥಾನ ಪಡೆದ ಅಲೆವೂರು ವೀರ ಕೇಸರಿ ತಂಡಕ್ಕೆ 75 ಸಾವಿರ ರೂ., ತೃತೀಯ ಸ್ಥಾನ ಪಡೆದ ಅಲೆವೂರು ವಿಷ್ಣು ಸೇವಾ ಬಳಗಕ್ಕೆ 50 ಸಾವಿರ ರೂ. ಬಹುಮಾನ ಮೊತ್ತ ನೀಡಿ ಪರ್ಯಾಯ ಶ್ರೀಗಳು ಸನ್ಮಾನಿಸಿದರು.