ಚಾಲಕನಿಗೆ ಹೃದಯಾಘಾತವುಂಟಾಗಿ ಮಣಿಪಾಲದಲ್ಲಿ ಡಿವೈಡರ್​ಗೆ ಢಿಕ್ಕಿ ಹೊಡೆದು ನಿಂತ ಖಾಸಗಿ ಶಾಲಾ ವಾಹನ. 
ಉಡುಪಿ

ಶಾಲಾ ಬಸ್​ ಚಾಲಕನಿಗೆ ಹೃದಯಾಘಾತ

* ಡಿವೈಡರ್​ಗೆ ಢಿಕ್ಕಿಯಾದ ವಾಹನ

* ತಪ್ಪಿದ ಭಾರಿ ಅನಾಹುತ

ಉಡುಪಿ: ಶಾಲಾ ವಾಹನ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹಠಾತ್​ ಹೃದಯಾಘಾತ ಉಂಟಾಗಿ ನಿಯಂತ್ರಣ ತಪ್ಪಿದ ವಾಹನ ರಸ್ತೆ ಮಧ್ಯೆಯ ಡಿವೈಡರ್​ಗೆ ಢಿಕ್ಕಿ ಹೊಡೆದ ಘಟನೆ ಮಣಿಪಾಲದಲ್ಲಿ ಸೋಮವಾರ (ಜೂ.15) ಬೆಳಗ್ಗೆ ನಡೆದಿದೆ.
ಮಣಿಪಾಲದಲ್ಲಿರುವ ಖಾಸಗಿ ಶಾಲೆಗೆ ಸೇರಿದ ಬಸ್​ ಅದಾಗಿದ್ದು, ತನ್ನ ರೂಟ್​ನಲ್ಲಿ ಇರುವ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಚಾಲಕ ಸುರೇಶ್​ ಸಣ್ಣಕ್ಕಿಬೆಟ್ಟು (54) ಎಂಬವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತು ಎನ್ನಲಾಗಿದೆ.
ಬಸ್​ ಚಾಲನೆಯಲ್ಲಿರುವಾಗಲೇ ತೀವ್ರವಾಗಿ ಅಸ್ವಸ್ಥಗೊಂಡ ಅವರು ಪರಿಸ್ಥಿತಿಯನ್ನು ಅರಿತು ಕೂಡಲೇ ವಾಹನವನ್ನು ರಸ್ತೆ ಬದಿಗೆ ತರುವ ಪ್ರಯತ್ನ ನಡೆಸಿದರು. ಆದರೆ, ನಿಯಂತ್ರಣ ತಪ್ಪಿ ರಸ್ತೆ ಮಧ್ಯೆಯ ಡಿವೈಡರ್​ಗೆ ಬಸ್​ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಸಂಭವಿಸಬಹುದಾಗಿದ್ದ ಭಾರಿ ಅನಾಹುತ ಅದೃಷ್ಟವಶಾತ್​ ತಪ್ಪಿದೆ. ಬಸ್​ ಅಪಘಾತಕ್ಕೊಳಗಾದ ತಕ್ಷಣ ಸ್ಥಳೀಯರು ಹಾಗೂ ಶಾಲಾ ಸಿಬ್ಬಂದಿ ಚಾಲಕನ ನೆರವಿಗೆ ಧಾವಿಸಿದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು.