ಉಡುಪಿಯ ಶೀಂಬ್ರ ಮಹಾಗಣಪತಿ ದೇವಸ್ಥಾನದ ಸ್ನಾನಘಟ್ಟದಲ್ಲಿ ನಿರ್ಮಾಣಗೊಳ್ಳಲಿರುವ ಸುರಕ್ಷತೆ ಕಾಮಗಾರಿಗೆ ಯಶ್​ಪಾಲ್​ ಸುವರ್ಣ ಚಾಲನೆ ನೀಡಿದರು. ಕೆ.ರಮೇಶ್​ ರಾವ್​, ವಾಸುದೇವ ಭಟ್​, ನವೀನ್​ ಶಿವತ್ತಾಯ, ಅನಿತಾ ಡಿಸೋಜ, ರಾಜೇಂದ್ರ ಮಯ್ಯ, ಪ್ರಶಾಂತ್​ ಭಟ್​, ದಿನೇಶ್​ ಅಮೀನ್​ ಇತರರಿದ್ದರು. 
ಉಡುಪಿ

ಶೀಂಬ್ರ ಸ್ನಾನಘಟ್ಟದಲ್ಲಿ ಭಕ್ತರ ಸುರಕ್ಷತೆಗೆ ಆದ್ಯತೆ

ಉಡುಪಿ ಶಾಶಕ ಯಶ್​ಪಾಲ್​ ಸುವರ್ಣ ಮಾಹಿತಿ
2.25 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ

ಉಡುಪಿ: ಪ್ರತಿವರ್ಷವೂ ಕೃಷ್ಣಂಗಾರಕ ಚತುರ್ದಶಿಯಂದು ಶೀಂಬ್ರ ಮಹಾಗಣಪತಿ ದೇವಸ್ಥಾನದ ಸ್ನಾನಘಟ್ಟಕ್ಕೆ ಸಾವಿರಾರು ಭಕ್ತರು ತೀರ್ಥಸ್ನಾನಕ್ಕೆ ಆಗಮಿಸುತ್ತಾರೆ. ಎರಡು ವರ್ಷದ ಹಿಂದೆ ತೀವ್ರ ನದಿ ಕೊರೆತದಿಂದ ಸ್ನಾನಘಟ್ಟ ಕೊಚ್ಚಿ ಹೋಗಿ ಭಕ್ತರಿಗೆ ಸಮಸ್ಯೆ ಉಂಟಾಗಿತ್ತು. ಇದೀಗ ಶಾಶ್ವತ ಪರಿಹಾರ ಕಲ್ಪಿಸಿದ್ದು, ಸುರಕ್ಷತೆ ಕಾಮಗಾರಿಗೆ ಕೈಗೆತ್ತಿಕೊಳ್ಳಲಾಗಿದೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದರು.
ಉಡುಪಿಯ ಮೂಡುಪೆರಂಪಳ್ಳಿ ವಾರ್ಡ್​ನ ಶೀಂಬ್ರ ಮಹಾಗಣಪತಿ ದೇವಸ್ಥಾನದ ಸಮೀಪದ ಸ್ನಾನ ಘಟ್ಟದಲ್ಲಿ ಸಣ್ಣ ನೀರಾವರಿ ಇಲಾಖೆಯ 2.25 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಸುರಕ್ಷತೆ ಕಾಮಗಾರಿಗೆ ಮಂಗಳವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಶಾಸಕರ ವಿಶೇಷ ಮುತುವರ್ಜಿ

ಶೀಂಬ್ರ ಮಹಾಗಣಪತಿ ದೇವಸ್ಥಾನದ ಪ್ರಮುಖರು ಹಾಗೂ ಇಂಜಿನಿಯರ್​ ಕೆ.ರಮೇಶ್​ ರಾವ್​ ಮಾತನಾಡಿ, ನದಿ ಕೊರೆತದಿಂದಾಗಿ ದೇವಸ್ಥಾನಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇತ್ತು. ಆ ಸಂದರ್ಭದಲ್ಲಿ ಭೇಟಿ ನೀಡಿದ್ದ ಶಾಸಕ ಯಶ್​ಪಾಲ್​ ಅವರು ಸ್ಥಳ ಪರಿಶೀಲಿಸಿದ್ದರು. ವಿಶೇಷ ಮುತುವರ್ಜಿ ವಹಿಸಿ ಇದೀಗ ಕಾಮಗಾರಿಗೆ ಅನುದಾನ ಒದಗಿಸಿಕೊಡುವ ಮೂಲಕ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖ ಬೇಡಿಕೆ ಈಡೇರಿಸಿದ್ದಾರೆ ಎಂದರು.
ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್​ ಪೆರಂಪಳ್ಳಿ ಮಾತನಾಡಿ, ಸ್ನಾನ ಘಟ್ಟ ಕಾಮಗಾರಿಗೆ ಚಾಲನೆ ನೀಡಿದ ಹಾಗೂ ದೇವಸ್ಥಾನದ ಸಂಪರ್ಕ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿ ಭಕ್ತರಿಗೆ ಅನುಕೂಲ ಕಲ್ಪಿಸಿದ ಶಾಸಕರಿಗೆ ಎಲ್ಲ ಭಕ್ತರ ಪರವಾಗಿ ಧನ್ಯವಾದ ಸಲ್ಲಿಸಿದರು.
ದೇವಳದ ಅರ್ಚಕ ನವೀನ್​ ಶಿವತ್ತಾಯ, ನಗರಸಭಾ ಸದಸ್ಯೆ ಅನಿತಾ ಡಿಸೋಜ, ಆರ್ಕಿಟೆಕ್ಟ್​ ರಾಜೇಂದ್ರ ಮಯ್ಯ, ನಗರಸಭಾ ಮಾಜಿ ಸದಸ್ಯ ಪ್ರಶಾಂತ್​ ಭಟ್​, ನಗರ ಬಿಜೆಪಿ ಅಧ್ಯಕ್ಷ ದಿನೇಶ್​ ಅಮೀನ್​, ಪ್ರಮುಖರಾದ ಡೆನಿಸ್​ ಮಸ್ಕರೇನಸ್​, ಶಶಾಂಕ್​ ಶಿವತ್ತಾಯ, ವಿಜಯ ಪೂಜಾರಿ, ಸಂತೋಷ್​ ಅಮೀನ್​, ಸುಮಾ, ಯಶೋಧರ್​ ಅಮೀನ್​, ಲೀನಾ, ರಂಜಿತ್​, ಸತೀಶ್​, ಶೆರ್ಲಿನ್​ ಇತರರು ಉಪಸ್ಥಿತರಿದ್ದರು.