ಅದಮಾರು ಮಠದಲ್ಲಿ ನಾರಾಯಣ ವರ್ಮ ಪಾರಾಯಣ ಸಹಿತ ಯಜ್ಞ ನಡೆಯಿತು.  
ಉಡುಪಿ

ಸಮಾಜಸೇವೆಗೆ ಮೋದಿ ಮಾದರಿ: ಅದಮಾರು ಶ್ರೀ

ಉಡುಪಿ: ದೇವರು ನೀಡಿರುವ ಈ ಮಾನವ ದೇಹವನ್ನು ಸಮಾಜಕ್ಕೆ ಉಪಯೋಗವಾಗುವಂತೆ ಸಾರ್ಥಕಗೊಳಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾದರಿಯಾಗಿದ್ದಾರೆ. 2014ರಿಂದ ಪ್ರಧಾನಿ ಮೋದಿ ಒಂದೂ ದಿನ ರಜೆ ತೆಗೆದುಕೊಳ್ಳದೆ ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ಪ್ರತಿಯೊಬ್ಬರೂ ಅವರ ಜನ್ಮದಿನವನ್ನು ಸಂಭ್ರಮಿಸಬೇಕು ಎಂದು ಅದಮಾರು ಮಠದ ಹಿರಿಯ ಪೀಠಾಧಿಪತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನ ಅಂಗವಾಗಿ ಅದಮಾರು ಮಠದಲ್ಲಿ 1008 ಬಾರಿ ಶ್ರೀ ಭಾಗವತ ಪುರಾಣಾಂತರ್ಗತ ನಾರಾಯಣ ವರ್ಮ ಪಾರಾಯಣ ಸಹಿತ ಯಜ್ಞದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಪ್ರಧಾನಿ ಮೋದಿ ಅವರ ಆರೋಗ್ಯ, ದೀರ್ಘಾಯುಷ್ಯ ಮತ್ತು ರಕ್ಷಣೆಗಾಗಿ ನಾರಾಯಣ ವರ್ಮ ಪಾರಾಯಣ ನಡೆಸಿ, ಅಗ್ನಿಯ ಮೂಲಕ ಭಗವಂತನಿಗೆ ಅರ್ಪಿಸಿ ಯಜ್ಞ ನಡೆಸಲಾಗಿದೆ. ಪ್ರಧಾನಿ ಮೋದಿ ಅವರಿಗೆ ಭಗವಂತನೇ ರಕ್ಷಾ ಕವಚವಾಗಿ ನಿಂತು ದೇಶಸೇವೆ ಮಾಡಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ವಿದ್ವಾನ್​ ಲಕ್ಷ್ಮಿಶ ಭಟ್​ ಮುದರಂಗಡಿ, ಡಾ. ವಂಶಿಕೃಷ್ಣ ಆಚಾರ್ಯ, ವಾಸುದೇವ ಭಟ್​ ಕಲ್ಲಂಜೆ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಸುಮಾರು 33 ಮಂದಿ ಋತ್ವಿಜರು ಪಾರಾಯಣದಲ್ಲಿ ಪಾಲ್ಗೊಂಡಿದ್ದರು.

ಪೂರ್ಣ ನವಗ್ರಹ ಯಾಗ
ಪ್ರಧಾನ ಮಂತ್ರಿ ನರೇಂದ್ರ ಮೋದೀಜಿಯವರ ಜನ್ಮದಿನದ ಪ್ರಯುಕ್ತ ನವದೆಹಲಿ ವೇದವ್ಯಾಸ ಗುರುಕುಲದಲ್ಲಿ ಸಕಲ ಶತ್ರುಭಯ ನಿವಾರಣಾ ಪೂರ್ವಕ ದಿಗ್ವಿಜಯ ಪ್ರಾಪ್ತಿ , ಉತ್ತಮ ಆರೋಗ್ಯಪೂರ್ಣ ದೀರ್ಘಾಯುಷ್ಯ , ಸಕಲ ಶ್ರೇಯಸ್ಸು, ಸಮೃದ್ಧಿ ಸುರಕ್ಷೆಗಾಗಿ ಪ್ರಾರ್ಥಿಸಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನಿರ್ದೇಶಾನುಸಾರ ಪೂರ್ಣ ನವಗ್ರಹ ಯಾಗ ನೆರವೇರಿತು. ವಿದ್ವಾನ್​ ವಿಠೋಬಾಚಾರ್ಯರ ಮಾರ್ಗದರ್ಶನದಲ್ಲಿ ವಿದ್ವಾನ್​ ನಂದಳಿಕೆ ವಿಠಲ ಭಟ್ಟರ ನೇತೃತ್ವದಲ್ಲಿ ಧಾರ್ಮಿಧ ವಿಧಿಗಳು ನಡೆದವು. ಉದ್ಯಮಿ ಅನಂತಕೃಷ್ಣ ರಾವ್​ ಉಪಸ್ಥಿತರಿದ್ದರು.