ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್​. ಉಗ್ರಪ್ಪ. 
ಉಡುಪಿ

ಮೋದಿ-ಶಾ, ಯೋಗಿ ರಾಜೀನಾಮೆ ನೀಡಲಿ

* ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್​. ಉಗ್ರಪ್ಪ ಆಗ್ರಹ

* ಅಯೋಧ್ಯಾ ಭ್ರಷ್ಟಾಚಾರದ ಹೊಣೆ ಹೊತ್ತಿಕೊಳ್ಳಲಿ

* ಶ್ರೀರಾಮನ ಮೇಲೆ ಭಕ್ತಿಯಿದ್ದರೆ ಜನರಲ್ಲಿ ಕ್ಷಮೆ ಯಾಚಿಸಿ

ಉಡುಪಿ: ಇಡಿ ವಿಶ್ವವೇ ಮರ್ಯಾದಾ ಪುರುಷೋತ್ತಮನಾದ ಭಗವಾನ್​ ಶ್ರೀರಾಮಚಂದ್ರನನ್ನು ಗೌರವಿಸುತ್ತದೆ, ಪೂಜಿಸುತ್ತದೆ. ಆದರೆ, ರಾಮನ ಹೆಸರಿನಲ್ಲೇ ಅಧಿಕಾರಕ್ಕೆ ಬಂದಿರುವ ಕೇಂದ್ರ ಬಿಜೆಪಿ ಸರ್ಕಾರ ಅಯೋಧ್ಯಾ ರಾಮ ಮಂದಿರದಲ್ಲಿ ನಡೆದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿದೆ. ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ಹಾಗೂ ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್​. ಉಗ್ರಪ್ಪ ಆಗ್ರಹಿಸಿದರು.
ಉಡುಪಿಯಲ್ಲಿ ಸೋಮವಾರ (ಜು.13) ಮಾಧ್ಯಮದವರೊಂದಿಗೆ ಮಾತನಾಡಿ, ರಾಷ್ಟ್ರದ ಗೌರವದ ಪ್ರತಿಕನಾಗಿರುವ ಶ್ರೀರಾಮನ ಮೇಲೆ ಕಿಂಚಿತ್ತಾದರೂ ಅವರಿಗೆ ಭಕ್ತಿಯಿದ್ದರೆ ದೇಶವಾಸಿಗರಲ್ಲಿ ಕ್ಷಮೆ ಯಾಚಿಸಬೇಕು ಎಂದರು.

ಲೂಟಿಯೂ ರಾಷ್ಟ್ರ ಪ್ರೇಮವೇ?

ಅಯೋಧ್ಯಾ ಭ್ರಷ್ಟಾಚಾರದಲ್ಲಿ ಆರ್​ಎಸ್​ಎಸ್​, ಬಿಜೆಪಿ ಹಾಗೂ ವಿಎಚ್​ಪಿಯ ಸದಸ್ಯರೇ ಭಾಗಿಯಾಗಿದ್ದಾರೆ. ಪ್ರಧಾನಿ ಮೋದಿ ಅವರ ಮಾಜಿ ಕಾರ್ಯದರ್ಶಿಯೂ ಇದ್ದಾರೆ. ಲೆಕ್ಕಕ್ಕೇ ಸಿಗದಷ್ಟು ಕೋಟಿ ರೂಪಾಯಿ ಸಂಖ್ಯೆಯಲ್ಲಿ ಹಣ, ವಜ್ರ, ಬಂಗಾರ, ಬೆಳ್ಳಿಯನ್ನು ಲೂಟಿ ಮಾಡಲಾಗಿದೆ. ರಾಮನ ಹೆಸರಲ್ಲಿ ಅಧಿಕಾರ ಪಡೆದು ರಾಮನ ಸ್ವತ್ತು ಲೂಟಿ ಮಾಡುವುದೂ ರಾಷ್ಟ್ರ ಪ್ರೇಮವೇ? ಶ್ರೀರಾಮನಿಗೇ ಮೋಸ ಮಾಡಿದ್ದು, ಇದರಂತಹ ದೇಶದ್ರೋಹ ಮತ್ತೊಂದಿಲ್ಲ. ಪ್ರಕರಣಕ್ಕೆ ಸಂಭಂದಿಸಿ 8 ಮಂದಿಯನ್ನು ಬಂಧಿಸಿದ್ದೀರಿ. ಆದರೆ, ಈವರೆಗೂ ದೇಗುಲ ಟ್ರಸ್ಟ್​ನ ಅಧ್ಯಕ್ಷ, ಕಾರ್ಯದರ್ಶಿಯನ್ನು ಏಕೆ ಬಂಧಿಸಿಲ್ಲ ಎಂದು ಉಗ್ರಪ್ಪ ಪ್ರಶ್ನಿಸಿದರು.

ಪೇಜಾವರ ಶ್ರೀಗಳ ಮೌನವೇಕೆ?

ರಾಜ್ಯವಷ್ಟೇ ಅಲ್ಲ ದೇಶ-ವಿದೇಶಗಳಲ್ಲೂ ಸಹ ಪೇಜಾವರ ಮಠದ ಮೇಲೆ ಜನರಿಗೆ ಅಪಾರ ಗೌರವವಿದೆ. ನಾನೂ ಸಹ ಶ್ರೀಗಳನ್ನು ಗೌರವಿಸುತ್ತೇನೆ. ಆದರೆ, ಅಯೋಧ್ಯಾ ದೇಗುಲದ ಟ್ರಸ್ಟಿಗಳಲ್ಲಿ ಒಬ್ಬರಾದ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಏಕೆ ಅಲ್ಲಿನ ಭ್ರಷ್ಠಾಚಾರದ ಕುರಿತು ಮೌನ ವಹಿಸಿದ್ದಾರೆ? ರಾಮ ಮಂದಿರದಲ್ಲಿ ಲೂಟಿಯಾದರೆ ಈ ದೇಶದ ಮರ್ಯಾದೆ ಉಳಿಯಲು ಸಾಧ್ಯವೇ? ಅವರು ಸುಮ್ಮನೆ ಇರುವುದನ್ನು ಕಂಡಾಗ ಅಲ್ಲಿ ನಡೆದ ಲೂಟಿಯಲ್ಲಿ ಅವರ ಪಾತ್ರವೂ ಇದೆಯೇ ಎಂದು ಜನರಿಗೂ ಸಂಶಯ ಬರುವುದು ಸಹಜವಲ್ಲವೇ? ಕ್ಷಮೆ ಯಾಚಿಸುವ ಸೌಜನ್ಯವೂ ಶ್ರೀಗಳಿಗೆ ಹಾಗೂ ಆರ್​ಎಸ್​ಎಸ್​ ಮುಖ್ಯಸ್ಥರಿಗೆ ಇಲ್ಲವೇ ಎಂದು ಪ್ರಶ್ನಿಸಿದರು. ಆರ್​ಎಸ್​ಎಸ್​ನವರು ದೇಶ-ವಿದೇಶಗಳಿಂದ ಪಡೆಯುವ ಫಂಡ್​ ಕುರಿತು ಆಡಿಟ್​ ಆಗಲೇಬೇಕು. ಅದಕ್ಕೂ ಮೊದಲು ಸಂಘದ ನೋಂದಾವಣಿ ಆಗಲೇಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

ರಾಜ್ಯ ಬಿಜೆಪಿಯೀಗ ಒಡೆದ ಮನೆ

ಕಳೆದ 5 ಉಪಚುನಾವಣೆಯಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ. ಇತ್ತೀಚೆಗೆ ನಡೆದ ಪರಿಷತ್​ ಚುನಾವಣೆಯಲ್ಲೂ ಸಹ ಅವರದೇ ಪಕ್ದದ ಶಾಸಕರು ಅಡ್ಡಮತದಾನ ಮಾಡಿರುವುದು ಜಗಜ್ಜಾಹಿರಾಗಿದೆ. ಹೀಗಾಗಿ ರಾಜ್ಯದ ಬಿಜೆಪಿ ನಾಯಕರು ಸ್ಥಿಮಿತತೆ ಕಳೆದುಕೊಂಡಿದ್ದು ಎಸ್​ಐಆರ್​ ವಿಚಾರವಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್​.ಅಶೋಕ್​, ಕೇಂದ್ರ ಸಚಿವರಾದ ಪ್ರಲ್ಹಾದ್​ ಜೋಶಿ, ಕುಮಾರಸ್ವಾಮಿ, ಸೋಮಣ್ಣ ಏನೇನೋ ಮಾತನಾಡುತ್ತಿದ್ದಾರೆ. ಅವರಲ್ಲೀಗ ಗುಂಪುಗಾರಿಕೆ ಹೆಚ್ಚುತ್ತಿದೆ. ರಾಜ್ಯ ಬಿಜೆಪಿಯೀಗ ಒಡೆದ ಮನೆಯಾಗಿದೆ ಎಂದು ಟೀಕಿಸಿದರು. ದೇಶಕ್ಕೆ ನುಸುಳುಕೋರರು ಬರದಂತೆ ತಡೆಯುವುದು ಕೇಂದ್ರ ಸರ್ಕಾರದ ಕಾರ್ಯವಲ್ಲವೇ? ಅನ್ಯರು ದೇಶದೊಳಗೆ ನುಗ್ಗುತ್ತಿದ್ದರೆ ಅದು ಕೇಂದ್ರ ಸರ್ಕಾರದ ವೈಫಲ್ಯ. ನುಸುಳುಕೋರರಿದ್ದರೆ ಒದ್ದು ಓಡಿಸಿ ಎಂದು ಉಗ್ರಪ್ಪ ಆಗ್ರಹಿಸಿದರು.