ಮೂಡುಬಿದಿರೆಯ ಶ್ರೀ ಅಯ್ಯಸ್ವಾಮಿ ಮಠದ ಎದುರಿನ ಪಾಲ್ಕೆ ಇಂದಿರಾ ಸಭಾಭವನದಲ್ಲಿ ಪುರೋಹಿತರ ಸಮ್ಮೇಳನ ನಡೆಯಿತು. ನೆಲ್ಲಿಕಾರು ಶ್ರೀಧರ ಪುರೋಹಿತರು, ಮಠದ ವ್ಯವಸ್ಥಾಪಕ ಬಿ.ವಿಶ್ವನಾಥ ಪುರೋಹಿತರು, ಪ್ರಧಾನ ಸಂಚಾಲಕ ಎಲ್ಲೂರು ಶಿವಶಂಕರ ಪುರೋಹಿತರು ಇದ್ದರು.
ಮೂಡುಬಿದಿರೆ: ಅವಿಭಜಿತ ದಕ್ಷಿಣ ಕನ್ನಡ ಜನಪದ ಶಾಖಾ ವಿಶ್ವ ವೈದಿಕ ಸಭಾ ವತಿಯಿಂದ 14ನೇ ವಷರ್ದ ಪುರೋಹಿತ ಸಮ್ಮೇಳನ ಮೂಡುಬಿದಿರೆಯ ಶ್ರೀ ಅಯ್ಯಸ್ವಾಮಿ ಮಠದ ಎದುರಿನ ಪಾಲ್ಕೆ ಇಂದಿರಾ ಸಭಾಭವನದಲ್ಲಿ ನಡೆಯಿತು.
ಸಭಾದ ಗೌರವಾಧ್ಯಕ್ಷ ನೆಲ್ಲಿಕಾರು ಶ್ರೀಧರ ಪುರೋಹಿತರು, ಮಠದ ವ್ಯವಸ್ಥಾಪಕ ಬಿ.ವಿಶ್ವನಾಥ ಪುರೋಹಿತರು, ಪ್ರಧಾನ ಸಂಚಾಲಕ ಎಲ್ಲೂರು ಶಿವಶಂಕರ ಪುರೋಹಿತರು, ಸಮ್ಮೇಳನಾಧಿಕಾರಿ ಜಗನ್ನಾಥ ಪುರೋಹಿತರು ಮೂಡುಬಿದಿರೆ ಹಾಗೂ ಬಜ್ಪೆ ಬಾಲಚಂದ್ರ ಪುರೋಹಿತರು ಸಮ್ಮೇಳನಕ್ಕೆ ಚಾಲನೆ ನೀಡಿದರು.
ವೈದಿಕ ಸಂಪ್ರದಾಯ ಉಳಿಸಿ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಸಮ್ಮೇಳನದಲ್ಲಿ ’ಪುರೋಹಿತರಿಂದ ಪುರೋಹಿತರಿಗಾಗಿ ಪುರೋಹಿತರಿಗೋಸ್ಕರ’ ಆಶಯದೊಂದಿಗೆ ವಿವಿಧ ವೈದಿಕ ವಿಷಯಗಳ ಕುರಿತು ಗೋಷ್ಠಿ ಹಾಗೂ ಪ್ರವಚನಗಳು ನಡೆದವು.
ಪುರೋಹಿತ ಜಿ.ಎಸ್.ಪುರಂದರ ಆಚಾರ್ಯ ಮುನಿಯಾಲು, ವಿ.ಬಿ.ಎಸ್.ಸಂಸ್ಕೃತ ವಿದ್ಯಾಪೀಠ, ಕೊಡಂಕೂರು ಪ್ರಾಂಶುಪಾಲ ವಿದ್ವಾನ್ ಶ್ರೀಧರ ಭಟ್ಟ, ಬೆಂಗಳೂರು ಡಿವಿವಿ, ಪಿಎಚ್.ಡಿ ಪ್ರಾಧ್ಯಾಪಕ ಡಾ.ವಿವೇಕ ಜೆ., ಪ್ರಾಧ್ಯಾಪಕಿ ಡಾ.ಕವಿತಾ ಸಿ. ಗೋಷ್ಠಿ ಪ್ರವಚನ ನೀಡಿದರು.
ಸಮಾರೋಪದಲ್ಲಿ ಸ್ವಸಮಾಜದ ಬಡತನದಲ್ಲಿರುವ ವಿದ್ಯಾಕಾಂಕ್ಷಿ ಏಳು ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿಯಡಿ ವಿದ್ಯಾರ್ಥಿವೇತನ ನೀಡಲಾಯಿತು. ಅಪಘಾತ, ಪ್ರಾಕೃತಿಕ ವಿಕೋಪ ಹಾಗೂ ತೀವ್ರ ನಿರ್ಗತಿಕ ರೋಗಿಗಳಿಗೆ ಆರ್ಯನಿಧಿ ಹಾಗೂ ಸುಖಾಶ್ರಯ ವಂಚಿತರಿಗೆ ಸೂರು ಯೋಜನೆಯಡಿ ಭಾಗ್ಯನಿಧಿಯಾಗಿ 2025-26ನೇ ಸಾಲಿನಲ್ಲಿ 1,05,000 ರೂ.ನೆರವು ನೀಡಲಾಯಿತು.
ಅಭಿಲಾಷ್ ಪುರೋಹಿತರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಸಂಯೋಜಕ ಸೂಡ ಗಣೇಶ ಪುರೋಹಿತರು ವರದಿ ವಾಚಿಸಿದರು. ವಿವೇಕ ಪುರೋಹಿತ್ ಕೊಯ್ಯೂರು ಸಮ್ಮೇಳನದ ಅನುಭವ ಹಂಚಿಕೊಂಡರು. ಕೋಶಾಧಿಕಾರಿ ಪದ್ಮನಾಭ ಪುರೋಹಿತ್ ಬಾಳಿಂಜ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಸಂಚಾಲಕ ಎಲ್ಲೂರು ಶಿವಶಂಕರ ಪುರೋಹಿತರು ಸ್ವಾಗತಿಸಿ ಸಭಾದ ಉದ್ದೇಶ, ಗುರಿ ಹಾಗೂ ಸಾಧನೆ ಕುರಿತು ಮಾತನಾಡಿದರು. ಸವಣಾಲು ಶಿವಪ್ರಸಾದ ಪುರೋಹಿತರು ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಬ್ರಹ್ಮಾವರ ಗಣೇಶ ಪುರೋಹಿತರು ವಂದಿಸಿದರು.