ಪ್ಲಾಸ್ಟಿಕ್ ಚೀಲ ಸಗಟು ವ್ಯಾಪಾರ ಮಳಿಗೆ.
ಬದಿಯಡ್ಕ: ಯುದ್ಧದ ಬಿಕ್ಕಟ್ಟಿನಿಂದಾಗಿ ಭತ್ತ, ಅಡಕೆ ತುಂಬುವ ಪ್ಲಾಸ್ಟಿಕ್ ಚೀಲ ತಯಾರಿಸಲು ಕಚ್ಚಾವಸ್ತುಗಳು ಕೊರತೆಯುಂಟಾಗಿ ಪ್ಲಾಸ್ಟಿಕ್ ಚೀಲಗಳ ಬೆಲೆ ಹೆಚ್ಚಳವಾಗಿದೆ. ಹಿಂದೆ 10-11 ರೂ. ಗಳಿದ್ದ ಪ್ಲಾಸ್ಟಿಕ್ ಚೀಲದ ಬೆಲೆ ಈಗ 15 ರೂ.ಗೆ ಏರಿದ್ದು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಹೆಚ್ಚಿನ ರೈತರು ಭತ್ತ, ಅಡಕೆ ತುಂಬಲು ಪ್ಲಾಸ್ಟಿಕ್ ಚೀಲ ಬಳಸುತ್ತಾರೆ. ಪ್ರತಿ ಋತುವಿನಲ್ಲಿ ಹೊಸ ಚೀಲಗಳನ್ನು ರೈತರು ಖರೀದಿಸುತ್ತಾರೆ. ಬೆಲೆ ಹೆಚ್ಚಳದಿಂದಾಗಿ ವ್ಯಾಪಾರಿಗಳಿಂದ ಹಳೇ ಚೀಲಗಳನ್ನು ಖರೀದಿಸುತ್ತಿದ್ದು ಇದಕ್ಕೂ ಕನಿಷ್ಠ 10 ರೂಪಾಯಿಯಷ್ಟು ದರವಿದೆ. ಹಳೇ ಚೀಲಗಳನ್ನು ಖರೀದಿಸಿದರೂ ಅವು ದೀರ್ಘಕಾಲ ಬಾಳಿಕೆ ಬರುವುದಿಲ್ಲ ಎಂಬ ಆತಂಕವೂ ಕಾಡುತ್ತಿದೆ.
ಚೀಲ ಒದಗಿಸದ ಗಿರಣಿಗಳು: ಕೇರಳಮ್ ರಾಜ್ಯ ನಾಗರಿಕ ಸರಬಾರಜು ನಿಗಮ (ಸಪ್ಲೈ ಕೋ)ದ ನಿಯಮದ ಪ್ರಕಾರ ರೈತರಿಗೆ ಭತ್ತ ತುಂಬಲು ಗಿರಣಿಗಳೇ ಚೀಲ ಒದಗಿಸಬೇಕು ಎಂಬ ನಿಬಂಧನೆ ಇದ್ದರೂ ಅದನ್ನು ಪಾಲಿಸುತ್ತಿಲ್ಲ. ಪ್ರತಿ ಋತುವಿನಲ್ಲಿ, ರೈತರೇ ಹಣ ಕೊಟ್ಟು ಚೀಲ ಖರೀದಿಸಿ ಭತ್ತ ತುಂಬಬೇಕಾಗಿದೆ. ಹಿಂದೆ ಭತ್ತವನ್ನು ಸೆಣಬಿನ ಚೀಲಗಳಲ್ಲಿ ತುಂಬಿಸಲಾಗುತ್ತಿತ್ತು. ಈಗ ಗುಣಮಟ್ಟದ ಸೆಣಬಿನ ಚೀಲಗಳ ಕೊರತೆ ಇರುವುದರಿಂದ ಪ್ಲಾಸ್ಟಿಕ್ ಚೀಲಗಳಿಗೇ ಹೆಚ್ಚು ಅವಲಂಬಿತರಾಗಿದ್ದಾರೆ.