ಕೆವಿಜಿ ಕಾಲೇಜಿನಲ್ಲಿ ನಡೆದ ಅರಣ್ಯ ಇಲಾಖೆ ಮತ್ತು ಕೃಷಿಕರ ಸಂವಾದ ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಮಾತನಾಡಿದರು. ಶಾಸಕಿ ಭಾಗೀರಥಿ ಮುರುಳ್ಯ, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಫ ಮೊದಲಾವರಿದ್ದರು. 
ಉಡುಪಿ

ಸೋಲಾರ್ ಬೇಲಿ ನಿರ್ಮಾಣಕ್ಕೆ ಸರ್ಕಾರಕ್ಕೆ ಒತ್ತಡ

ವಿಜಯವಾಣಿ ಸುದ್ದಿಜಾಲ ಸುಳ್ಯ

ಕಾಡಾನೆ ಹಾವಳಿ ಪ್ರದೇಶದಲ್ಲಿ ಸಂಪೂರ್ಣ ಸರ್ಕಾರದ ವೆಚ್ಚದಲ್ಲಿ ಸೋಲಾರ್ ಬೇಲಿ ನಿರ್ಮಿಸಬೇಕು ಎಂದು ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೆವಿಜಿ ಆಯುರ್ವೇದ ಕಾಲೇಜು ಸಭಾಂಗಣದಲ್ಲಿ ಕೃಷಿಕರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನೇರ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಳ್ಯವನ್ನು ಅತ್ಯಂತ ಹೆಚ್ಚು ಆನೆ ಪೀಡಿತ ಪ್ರದೇಶ ಎಂದು ಸರ್ಕಾರಕ್ಕೆ ಮನವರಿಕೆ ಮಾಡಬೇಕು, ಈ ಸಂಬಂಧ ಸಮಗ್ರ ವರದಿಯನ್ನು ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಮಾತನಾಡಿ, ಕಾಡಾನೆ ಹಾವಳಿ ತಡೆಗಟ್ಟಲು ಇಲಾಖೆ ವತಿಯಿಂದ ಎಲ್ಲ ಪ್ರಯತ್ನ ನಡೆಸಲಾಗುವುದು. ಆನೆ ದಾಳಿ ನಷ್ಟಕ್ಕೆ ಪರಿಹಾರ ಹೆಚ್ಚಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಸೋಲಾರ್ ಬೇಲಿ ನಿರ್ಮಾಣದ ಸಬ್ಸಿಡಿ ಹೆಚ್ಚಳ ಕುರಿತು ಬೇಡಿಕೆ ಸಲ್ಲಿಸಲಾಗುವುದು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹಾಗೂ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಕೃಷಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ರಾಧಾಕೃಷ್ಣ ಬೊಳ್ಳೂರು, ಹರೀಶ್ ಕಂಜಿಪಿಲಿ, ವಿನಯಕುಮಾರ್ ಕಂದಡ್ಕ, ಕೇಶವ ಅಡ್ತಲೆ, ಕೆ.ಪಿ.ಜಗದೀಶ್, ಪ್ರಭಾಕರ ರೈ, ಅಶೋಕ್ ಪೀಚೆ, ರಾಜೇಶ್ ಭಟ್, ಶಶಿಧರ ಎಂ.ಜೆ., ರತ್ನಾಕರ ಬಳ್ಳಡ್ಕ, ಸತೀಶ್ ದಾಸರಬೈಲು, ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಫ, ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ ಡಿ.ವಿ., ಡಾ.ಅವಿನಾಶ್, ವಲಯ ಅರಣ್ಯಾಧಿಕಾರಿಗಳಾದ ನಿರಂಜನ್ ಶೆಟ್ಟಿ, ಕಿರಣ್ ಬಿ.ಎಂ., ಸಂಧ್ಯಾ, ಚೇತನ್ ಉಪಸ್ಥಿತರಿದ್ದರು.

ಕೃಷಿ ಹಾನಿ ಪರಿಹಾರ ಹೆಚ್ಚಳಕ್ಕೆ ಬೇಡಿಕೆ

ಆನೆ ಹಾವಳಿಯಿಂದ ಆದ ಕೃಷಿ ಹಾನಿಗೆ ನೀಡುವ ಪರಿಹಾರ ಅತಿ ಕಡಿಮೆ ಇದೆ ಇದನ್ನು ಹೆಚ್ಚಿಸಿ ಗರಿಷ್ಠ ಪರಿಹಾರ ಒದಗಿಸಬೇಕು, ಆನೆ ದಾಳಿಯಿಂದ ಪ್ರಾಣ ಹಾನಿ ಸಂಭವಿಸಿದರೆ ಕುಟುಂಬಕ್ಕೆ ಪರಿಹಾರದ ಜತೆಗೆ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು, ನಾಡಿನಲ್ಲಿ ದಾಳಿ ಮಾಡುವ ಆನೆಗಳನ್ನು ಹಿಡಿದು ಆನೆ ಶಿಬಿರ ಸ್ಥಾಪಿಸಿ ಅಲ್ಲಿಗೆ ಸ್ಥಳಾಂತರ ಮಾಡಬೇಕು, ಕಾಡಿನಲ್ಲಿ ಕಾಡಾನೆಗಳಿಗೆ ಮತ್ತು ಇತರ ವನ್ಯ ಪ್ರಾಣಿಗಳಿಗೆ ಆಹಾರದ ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು, ಸೋಲಾರ್ ಬೇಲಿ ನಿರ್ಮಾಣ ಸಬ್ಸಿಡಿಯನ್ನು ಶೇ.50ರಿಂದ 90ಕ್ಕೆ ಏರಿಸಬೇಕು, ಆನೆ ಕಂದಕಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಬೇಕು, ಕಾಂಕ್ರೀಟ್ ತಡೆಗೋಡೆ ನಿರ್ಮಾಣ, ತೂಗು ಬೇಲಿ ನಿರ್ಮಿಸಬೇಕು ಇತ್ಯಾದಿ ಪ್ರಮುಖ ಬೇಡಿಕೆಗಳು ಕೇಳಿಬಂದವು.