ಉಡುಪಿಯ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ರಾಜ್ಯಾಧ್ಯಕ್ಷೆ ಡಾ. ಕಾಂತಿ ಹರೀಶ್​ ಮಾತನಾಡಿದರು. ಎಚ್​.ರವೀಂದ್ರ, ಆಗ್ನೇಸ್​ ಕುಂದರ್​, ಶಶಿಕಲಾ ಕೋಟ್ಯಾನ್​, ಯೂನಿಸ್​ ಇದ್ದರು.  
ಉಡುಪಿ

ಸಮಾನ ವೇತನಕ್ಕಾಗಿ ಬೆಂಗಳೂರಲ್ಲಿ ಜ.28ರಂದು ಮುಷ್ಕರ

* ಸಂಟನೆಯ ರಾಜ್ಯಾಧ್ಯಕ್ಷೆ ಡಾ.ಕಾಂತಿ ಹರೀಶ್​ ಮಾಹಿತಿ

* ರಾಜ್ಯ ವಿಶೇಷ ಶಿಕ್ಷಕರು, ಶಿಕ್ಷಕೇತರ ಸಂಘದಿಂದ ಪ್ರತಿಭಟನೆ

ಉಡುಪಿ: ರಾಜ್ಯದಲ್ಲಿರುವ ವಿಶೇಷ ಮಕ್ಕಳ ಶಾಲೆಗಳು ಅನುಭವಿಸುತ್ತಿರುವ ಸಮಸ್ಯೆ, ಶಿಕ್ಷಕರು-ಸಿಬ್ಬಂದಿ ವೇತನದಲ್ಲಿ ಇಬ್ಬಗೆಯ ಧೋರಣೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂ (ರಿ.) ಮತ್ತು ಕರ್ನಾಟಕ ರಾಜ್ಯ ವಿಕಲಚೇತನರ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜ.28ರಂದು ಸಾರ್ವತ್ರಿಕ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷೆ ಡಾ. ಕಾಂತಿ ಹರೀಶ್​ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಜ.24) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2007ರಿಂದ ಇದೇ ವಿಚಾರವಾಗಿ ಪ್ರತಿಭಟಿಸುತ್ತಲೇ ಇದ್ದೇವೆ. ಆದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ. ಇದೇ ವಿಚಾರವಾಗಿ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್​ ಅವರು ಎರಡು ಸಲ ಸಭೆ ನಡೆಸಿ, ವಿಶೇಷ ಶಿಕ್ಷಕರಿಗೆ ಶೇ.40 ವೇತನ ಏರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದ್ದಾರೆ. ಅದನ್ನು ಕೂಡಲೇ ಜಾರಿಮಾಡಬೇಕು ಎಂದರು.

ನಮಗೇಕೆ ವೇತನ ತಾರತಮ್ಯ?

ರಾಜ್ಯದಲ್ಲಿ 3,500ಕ್ಕೂ ಅಧಿಕ ವಿಶೇಷ ಶಿಕ್ಷಕರು, 2,500ಕ್ಕೂ ಅಧಿಕ ಶಿಕ್ಷಕೇತರ ಸಿಬ್ಬಂದಿ ಇದ್ದಾರೆ. 4 ಕಂತುಗಳಲ್ಲಿ ನಮಗೆ ವೇತನ ನೀಡುತ್ತಾರೆ. ಆದರೆ, 7 ತಿಂಗಳು ಕಳೆದರೂ ಸಹ 2ನೇ ಕಂತಿನ ಗೌರವ ವೇತನ ನೀಡಿಲ್ಲ. ಶಿಶು ಕೇಂದ್ರಿತ ಶೈಕ್ಷಣಿಕ ಯೋಜನೆ ಅನುದಾಡಿ ರಾಜ್ಯದಲ್ಲಿ 180ಕ್ಕೂ ಅಧಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ವಿಶೇಷ ಚೇತನ ಮಕ್ಕಳ ಕಾಳಜಿ, ಪೋಷಣೆ ಸುಲಭದ ಕಾರ್ಯವಲ್ಲ. ಆದರೂ ಸಹ ನಮಗೆ ಸಾಮಾನ್ಯ ಶಿಕ್ಷಕರಿಗೆ ನೀಡುವ ವೇತನ ಲಭಿಸುತ್ತಿಲ್ಲ. 1982ರ ಅನುದಾನ ನೀತಿಯಂತೆ ರಾಜ್ಯ 32 ವಿಶೇಷ ಶಾಲೆಗಳ ಶಿಕ್ಷಕರಿಗೆ ಮಾತ್ರ ಹೆಚ್ಚಿನ ವೇತನ ನೀಡಲಾಗುತ್ತಿದೆ. ವೇತನ ತಾರತಮ್ಯ ಸರಿಪಡಿಸಬೇಕು ಎನ್ನುವುದು ಮುಷ್ಕರದ ಪ್ರಮುಖ ಉದ್ದೇಶ ಎಂದು ಡಾ. ಕಾಂತಿ ತಿಳಿಸಿದರು.

ಜೀವನ ನಿರ್ವಹಣೆಗೆ ತೊಡಕು

ಉಡುಪಿ ಜಿಲ್ಲಾ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ಅಧ್ಯಕ್ಷ ಎಚ್​.ರವೀಂದ್ರ ಮಾತನಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ. ಶಿಕ್ಷಕರಿಗೆ 20,200ರೂ., ಸಹಾಯಕರಿಗೆ 13,500ರೂ., ವಾರ್ಡನ್​ಗೆ 12,750 ರೂ., ಅಡುಗೆಯವರಿಗೆ 12 ಸಾವಿರ ರೂ. ನೀಡಲಾಗುತ್ತಿದೆ. ಇಷ್ಟು ಕನಿಷ್ಠ ವೇತನದಿಂದ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವೇ? ಯಾವುದೇ ಭದ್ರತೆಯೂ ನಮಗಿಲ್ಲ. ಹೀಗಾಗಿ ಸರ್ಮೋಚ್ಚ ನ್ಯಾಯಾಲಯದ ಆದೇಶದಂತೆ ವಿಶೇಷ ಶಾಲೆಗಳ ಶಿಕ್ಷಕರಿಗೆ ಪೂರ್ಣ ಪ್ರಮಾಣದ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಐದು ಪ್ರಮುಖ ಬೇಡಿಕೆಗಳು

1) ಸಮಾನ ಕೆಲಸಕ್ಕೆ ಸಮಾನ ವೇತನ ಎಂಬಂತೆ ಶಿಶು ಕೇಂದ್ರಿತ ಅನುದಾನ ಪಡೆಯುತ್ತಿರುವ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ 1982ರ ಅನುದಾನಡಿ ದೊರಕುವ ಎಲ್ಲ ಸೌಲಭ್ಯ ಜಾರಿ ಮಾಡಬೇಕು.
2) ವಿಧಾನಸಭಾಧ್ಯಕ್ಷರ ನೇತೃತ್ವದಲ್ಲಿ ಎರಡು ಪ್ರಮುಖ ಸಭೆ ನಡೆದು ಅದರ ಆದೇಶದಂತೆ ಇಲಾಖಾ ನಿರ್ದೇಶಕರು ರಾಜ್ಯದ ವಿಶೇಶ ಶಾಲೆಗಳ ಅನುದಾನವನ್ನು ಶೇ.40 ಏರಿಕೆ ಮಾಡಿ ಸರ್ಕಾರಕ್ಕೆ ನೀಡಿರುವ ಪ್ರಸ್ತಾವನೆ ಕೂಡಲೇ ಮಂಜೂರು ಮಾಡಬೇಕು.
3) ಸರ್ಮೋಚ್ಚ ನ್ಯಾಯಾಲಯ ಆದೇಶ ಮಾಡಿದಂತೆ ರಾಜ್ಯದ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರಿಗೆ ಪೂರ್ಣ ಪ್ರಮಾಣದ ಆರ್ಥಿಕ ಸೌಲಭ್ಯ ನೀಡಬೇಕು.
4) ಶಿಶು ಸಂಬಂಧಿತ ಸಹಾಯಧನ ಯೋಜನೆಯ ಮಾರ್ಗದರ್ಶಿಯನ್ನು ಪ್ರತಿ 5 ವರ್ಷಕ್ಕೊಮ್ಮೆ ಪುನಾರಚಿಸಿ ಆಯ್ದ ಶಾಲೆಗಳ ಪರಿಣತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.
5) ವಿಶೇಷ ಶಾಲೆಗಳಿಗೆ ಇಲಾಖೆ ನೀಡುವ ಅನುದಾನವನ್ನು ಪ್ರತಿ ವರ್ಷ 2 ಕಂತುಗಳಲ್ಲಿ (ಜೂನ್​ ಹಾಗೂ ಅಕ್ಟೋಬರ್​ ತಿಂಗಳಲ್ಲಿ) ನೀಡಬೇಕು.  
ಸುದ್ದಿಗೋಷ್ಠಿಯಲ್ಲಿ ಸಂಟನೆಯ ಗೌರವಾಧ್ಯಕ್ಷೆ  ಆಗ್ನೇಸ್​ ಕುಂದರ್​, ಕಾರ್ಯದರ್ಶಿ ಶಶಿಕಲಾ ಕೋಟ್ಯಾನ್​, ಆಶಾ ನಿಲಯ ವಿಶೇಷ ಶಾಲೆಯ ಮುಖ್ಯಸ್ಥೆ ಯೂನಿಸ್​, ನೇಜಾರಿನ ನೂರುಲ್​ ಫುರ್ಕಾನ್​ ವಿಶೇಷ ಶಾಲೆಯ ದಿಲ್​ದಾರ್​, ಕೌಸರ್​ ಉಪಸ್ಥಿತರಿದ್ದರು.
"

ಹಾಸ್ಟೆಲ್​ನಲ್ಲಿರುವ ಒಂದು ಮಗುವಿಗೆ ವಸತಿ, ಊಟೋಪಹಾರ, ಸಾರಿಗೆ ಎಲ್ಲ ಸೇರಿ 10,200ರೂ. ಅನುದಾನ ಹಾಗೂ ಡೇ ಕೇರ್​ ಮಗುವಿಗೆ 9 ಸಾವಿರ ರೂ. ನೀಡಲಾಗುತ್ತಿದೆ. ಸರ್ಕಾರ ಈಗ ನೀಡುತ್ತಿರುವ ಅನುದಾನದಲ್ಲಿ ವಿಶೇಷ ಶಾಲೆಗಳ ನಿರ್ವಹಣೆಗೂ ತೊಡಕಾಗಿದೆ. 7 ಮಗುವಿಗೆ ತಲಾ 1 ಶಿಕ್ಷಕರು ಇರಬೇಕು. ಆದರೆ, 13 ಮಕ್ಕಳಿದ್ದಲ್ಲಿ (1 ಮಗು ಕಡಿಮೆ ಇದ್ದರೆ) ಒಂದು ಶಿಕ್ಷಕರಿಗೆ ಕೆಲಸ ಇಲ್ಲದಾಗುತ್ತದೆ. ಹೀಗಾಗಿ ಕೆಲಸದ ಭದ್ರತೆಯೂ ಇಲ್ಲ. ವಿಶೇಷ ಮಕ್ಕಳ ಪಾಲನೆ ಸುಲಭವಲ್ಲ. ಇದು ತಿಳಿದೂ ಸಹ ಅತ್ಯಂತ ಕನಿಷ್ಠ ವೇತನ ನೀಡುತ್ತಿದ್ದಾರೆ. ನಮಗೂ ಸಾಮಾನ್ಯ ಶಿಕ್ಷರ ವೇತನ ನೀಡಬೇಕೆನ್ನುವುದು ಬೇಡಿಕೆಯಾಗಿದೆ.