ಉಡುಪಿ ಡಾ.ಜಿ.ಶಂಕರ್​ ಸರ್ಕಾರಿ ಕಾಲೇಜ್​ನಲ್ಲಿ ಆಯೋಜಿಸಿದ್ದ 'ಪ್ರೇರಣಾ' ಉದ್ಯೋಗ ಸಿದ್ಧತೆ ಕಾರ್ಯಕ್ರಮದಲ್ಲಿ ಪ್ರೊ. ನಿಕೇತನಾ ಮಾತನಾಡಿದರು. ವಿಜಯಕುಮಾರ್​ ಬಿ.ಸಿ., ಶರತ್​ ಕುಮಾರ್​ ಸಂತೋಷ್​ ಪ್ರಭು ಎಂ. ಇದ್ದರು. 
ಉಡುಪಿ

ಎಐ ಕಲಿಕೆಯಿಂದ ವೃತ್ತಿ ಕೌಶಲ ವೃದ್ಧಿ

* ಪ್ರಾಂಶುಪಾಲೆ ಪ್ರೊ. ನಿಕೇತನಾ ಅಭಿಪ್ರಾಯ

* 'ಪ್ರೇರಣಾ' ಉದ್ಯೋಗ ಸಿದ್ಧತೆ ಕಾರ್ಯಕ್ರಮ

ಉಡುಪಿ: ಇಂದು ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಅಳವಡಿಕೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತಂತ್ರಜ್ಞಾನ ಹಾಗೂ ಮಾರ್ಗದರ್ಶನ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕೃತಕಬುದ್ಧಿಮತ್ತೆ (ಎಐ) ಕಲಿಕೆಯಿಂದ ಸಾಮರ್ಥ್ಯ ಬೆಳವಣಿಗೆಯಾಗುವುದಲ್ಲದೆ ವೃತ್ತಿ ಕೌಶಲ ವೃದ್ಧಿಯಾಗುತ್ತದೆ ಎಂದು ಪ್ರಾಂಶುಪಾಲೆ ಪ್ರೊ. ನಿಕೇತನಾ ಅಭಿಪ್ರಾಯಪಟ್ಟರು.
ಉಡುಪಿಯ ಅಜ್ಜರಕಾಡಿನ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉದ್ಯೋಗ ಮಾರ್ಗದರ್ಶನ ಮತ್ತು ಪ್ಲೇಸ್​ಮೆಂಟ್​ ಸೆಲ್​, ಐಕ್ಯೂಎಸಿ, ಬೆಂಗಳೂರಿನ ಮೆಂಟರ್​ ಟುಗೆದರ್​ ಸಹಯೋಗದಲ್ಲಿ ಸೋಮವಾರ (ಸೆ.7) ಆಯೋಜಿಸಿದ್ದ 'ಪ್ರೇರಣಾ' ಉದ್ಯೋಗ ಸಿದ್ಧತೆ ಮತ್ತು ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

'ಮೆಂಟರ್​ ಟು ಗೋ' ಆ್ಯಪ್​ನ ಪ್ರಾತ್ಯಕ್ಷಿಕೆ

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಮೆಂಟರ್​ ಟುಗೆದರ್​ನ ಹಿರಿಯ ಸಹಾಯಕ ವಿಜಯಕುಮಾರ್​ ಬಿ.ಸಿ., 'ಮೆಂಟರ್​ ಟು ಗೋ' ಆ್ಯಪ್​ನ ಪ್ರಾತ್ಯಕ್ಷಿಕೆ ನೀಡಿದರು. ಕೃತಕಬುದ್ಧಿಮತ್ತೆಯ ವಿವಿಧ ಅಂಶ, ಉದ್ಯೋಗ ಕ್ಷೇತ್ರದಲ್ಲಿ ಎಐ ಮಹತ್ವ ಹಾಗೂ ಅದರಿಂದ ರೂಪುಗೊಳ್ಳುತ್ತಿರುವ ಹೊಸ ವೃತ್ತಿ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾಲೇಜ್​ನ ಪ್ಲೇಸ್​ಮೆಂಟ್​ ಸೆಲ್​ನ ಸಂಚಾಲಕರಾದ ಶರತ್​ ಕುಮಾರ್​ ಹಾಗೂ ಸಂತೋಷ್​ ಪ್ರಭು ಎಂ., ಐಕ್ಯೂಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ ಉಪಸ್ಥಿತರಿದ್ದರು.