ಉಡುಪಿ ತೆಂಕನಿಡಿಯೂರು ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರೇರಣಾ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಡಾ. ಪ್ರಸಾದ್ ರಾವ್ ಮಾತನಾಡಿದರು. ನಿತ್ಯಾನಂದ್ ವಿ. ಗಾಂವ್ಕರ್, ಡಾ. ವಿಷ್ಣುಮೂರ್ತಿ ಪ್ರಭು, ಡಾ.ಶ್ರೀಧರ್ ಭಟ್, ರಾಜಕುಮಾರ್, ಕೃಷ್ಣ ಸಾಸ್ತಾನ, ಬಿಂದು ಟಿ., ಡಾ. ರೋಶನ್ ಶೆಟ್ಟಿ ಇದ್ದರು.
* ಪ್ರಾಧ್ಯಾಪಕ ಡಾ. ಪ್ರಸಾದ್ ರಾವ್ ಅನಿಸಿಕೆ
* ತೆಂಕನಿಡಿಯೂರು ಕಾಲೇಜಿನಲ್ಲಿ ಪ್ರೇಣಾ ಅಭಿವಿನ್ಯಾಸ
ಉಡುಪಿ: ಉನ್ನತ ಶಿಕ್ಷಣದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಗತ್ಯ ಜ್ಞಾನ, ಕೌಶಲ, ವೃತ್ತಿ ಬದುಕಿನ ಕಲ್ಪನೆಯೊಂದಿಗೆ ಕ್ರಿಯಾಶೀಲರಾಗಬೇಕು. ಕಾಲೇಜಿನಲ್ಲಿ ಲಭ್ಯವಿರುವ ಹಾಗೂ ಸರ್ಕಾರ ನೀಡುವ ಸೌಲಭ್ಯದಿಂದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಪೌರತ್ವದ ಜವಾಬ್ದಾರಿ ನಿರ್ವಹಿಸಿ ಉತ್ತಮ ನಾಗರಿಕರಾಗಬೇಕು. ಸುಂದರ ಮತ್ತು ಅರ್ಥಪೂರ್ಣ ಬದುಕಿನ ಬುನಾದಿಯೇ ಉನ್ನತ ಶಿಕ್ಷಣವಾಗಿದೆ ಎಂದು ಬಾರ್ಕೂರು ಸರ್ಕಾರಿ ಪದವಿ ಕಾಲೇಜ್ನ ಆಂಗ್ಲ ಭಾಷಾ ಪ್ರಾಧ್ಯಾಪಕ ಡಾ. ಪ್ರಸಾದ್ ರಾವ್ ತಿಳಿಸಿದರು.
ಉಡುಪಿ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ 2026-27ನೇ ಸಾಲಿನ ಬಿಎ, ಬಿಎಸ್ಡಬ್ಲ್ಯು, ಬಿಕಾಂ, ಬಿಬಿಎ. ಬಿಸಿಎ, ಬಿಎಸ್ಸಿ ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರೇರಣಾ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಐಕ್ಯುಎಸಿ ಸಂಚಾಲಕ ಡಾ. ವಿಷ್ಣುಮೂರ್ತಿ ಪ್ರಭು ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಅಗತ್ಯವಿರುವ ವಿವಿಧ ದೃಷ್ಟಿಕೋನದ ಅಗತ್ಯತೆ ತಿಳಿಸಿದರು. ವಿದ್ಯಾರ್ಥಿಳಿಗೆ ವಿಶ್ವವಿದ್ಯಾನಿಲಯದ ನಿಯಮಗಳ ಕುರಿತಾಗಿ ಮಾಹಿತಿ ನೀಡಲಾಯಿತು. ಕಾಲೇಜ್ನ ಪ್ರಾಂಶುಪಾಲ ನಿತ್ಯಾನಂದ್ ವಿ. ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು.
ಶೈಕ್ಷಣಿಕ ಸಲಹೆಗಾರ ಡಾ.ಶ್ರೀಧರ್ ಭಟ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರಾಜಕುಮಾರ್, ಗ್ರಂಥಪಾಲಕ ಕೃಷ್ಣ ಸಾಸ್ತಾನ, ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಬಿಂದು ಟಿ. ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಶನ್ ಶೆಟ್ಟಿ ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಉಮೇಶ್ ಪೈ ವಂದಿಸಿದರು. ಸಹಪ್ರಾಧ್ಯಾಪಕ ಪ್ರಶಾಂತ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು.