ಕಾಪು ಮೆಸ್ಕಾಂ ಉಪ ವಿಭಾಗದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರಿಂದ ಅಹವಾಲು ಸ್ವೀಕರಿಸಲಾಯಿತು. ಪ್ರಮುಖರಾದ ರಾಕೇಶ್, ಪ್ರಸನ್ನ, ಅರವಿಂದ ಕೆ.ಎಸ್. ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಗ್ರಾಹಕರು ಜನಸಂಪರ್ಕ ಸಭೆಯಲ್ಲಿ ಸಮಸ್ಯೆ ಪ್ರಸ್ತಾಪಿಸುವ ಮೊದಲೇ ಶಾಖಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಆಗಬೇಕಿರುವ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಿ ಆದ್ಯತೆಯಲ್ಲಿ ಕೆಲಸ ನಿರ್ವಹಿಸುವಂತೆ ಮೆಸ್ಕಾಂ ಉಡುಪಿ ಅಧೀಕ್ಷಕ ಇಂಜಿನಿಯರ್ ರಾಕೇಶ್ ಅಧಿಕಾರಿಗಳಿಗೆ ಸೂಚಿಸಿದರು. ಕಾಪು ಉಪವಿಭಾಗದಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಪಡುಬಿದ್ರಿ ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲಿ 24 ಕಬ್ಬಿಣದ ಕಂಬಗಳಿವೆ. ಅವುಗಳನ್ನು ಆದ್ಯತೆಯಲ್ಲಿ ಹಂತ ಹಂತವಾಗಿ ಬದಲಾಯಿಸಲು ಕ್ರಮವಹಿಸಿ, ಪಡುಬಿದ್ರಿ ಗ್ರಾ.ಪಂ.ನಿಂದ ಬಾಕಿಯಿರುವ ವಿದ್ಯುತ್ ಬಿಲ್ ಪಾವತಿ ಕುರಿತ ಸಮಸ್ಯೆಯನ್ನು ಪರಿಹರಿಸಿ ಪಾದೆಬೆಟ್ಟು ಗ್ರಾಮದಲ್ಲಿ ದಾರಿದೀಪ ಅಳವಡಿಕೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಶಾಖಾಧಿಕಾರಿಗೆ ಸೂಚನೆ ನೀಡಿದರು.
ಮೂಡಬೆಟ್ಟು ಗ್ರಾಮದ ಬಳಿಯಲ್ಲಿ ವಿದ್ಯುತ್ ಕಂಬಗಳಲ್ಲಿ ಗಿಡಗಂಟಿಗಳು ಬೆಳೆದು ಅಪಾಯಕಾರಿಯಾಗಿರುವ ಬಗ್ಗೆ ವಿನಯ್ ಗಮನ ಸೆಳೆದರು. ಶಿರ್ವ ಮೆಸ್ಕಾಂ ಶಾಖಾ ವ್ಯಾಪ್ತಿಯ ಅರಸಿಕಟ್ಟೆಯಲ್ಲಿ ಹಳೆಯ ಟ್ರಾನ್ಸ್‌ಫಾರ್ಮರ್ ಬದಲಾಯಿಸಲು ಕ್ರಮವಹಿಸುವಂತೆ ರಾಕೇಶ್ ಶಾಖಾಧಿಕಾರಿಗೆ ಸೂಚಿಸಿದರು.
ಉಡುಪಿ ವಿಭಾಗೀಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಸನ್ನ, ಕಾಪು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅರವಿಂದ್ ಕೆ.ಎಸ್. ಹಾಗೂ ಶಾಖಾಧಿಕಾರಿಗಳು ಇದ್ದರು.
ಕಾಮಗಾರಿ ಶೀಘ್ರ ಪ್ರಾರಂಭ
ಖಾಸಗಿ ಜಾಗದ ವಾಲೀಕರ ರಸ್ತೆಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ ನಡೆಯಲಿದ್ದು, ಶೀಘ್ರದಲ್ಲಿ ಪಡುಬಿದ್ರಿ ವಿದ್ಯುತ್ ಉಪಕೇಂದ್ರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಪ್ರಸ್ತಾವಿತ ಪ್ರದೇಶದಲ್ಲಿಯೇ ಶಾಖಾ ಕಚೇರಿ ತೆರೆಯಲು ಗ್ರಾಹಕರಿಂದ ಒತ್ತಾಯ ಕೇಳಿ ಬರುತ್ತಿದೆ. ಆದರೆ ಕಚೇರಿಗೆ ಅಗತ್ಯ ಸ್ಥಳಾವಕಾಶದ ಕೊರತೆಯಿದೆ. ಕಚೇರಿ ನಿರ್ವಾಣಕ್ಕೆ ಸೂಕ್ತ ಸರ್ಕಾರಿ ಜಮೀನು ಗುರುತಿಸುವಂತೆ ಶಾಖಾಧಿಕಾರಿಗೆ ಅಧೀಕ್ಷಕ ಇಂಜಿನಿಯರ್ ರಾಕೇಶ್ ತಿಳಿಸಿದರು.
ಎಡ್ಜ್ ಫ್ಯೂಸ್ ಹಾಕಲು 15 ಗಂಟೆ
ಮಲ್ಲಾರು ಗ್ರಾಮದಲ್ಲಿನ ವಿದ್ಯುತ್ ಪರಿವರ್ತಕವೊಂದರ ಎಡ್ಜ್ ್ಯೂಸ್ ಭಾನುವಾರದಂದು ಕಡಿತಗೊಂಡು ಪರಿಸರದ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ 15 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ಸಮಸ್ಯೆ ಬಗೆಹರಿಸಲು ಮೆಸ್ಕಾಂಗೆ ದೂರು ನೀಡಿದರೂ, ಸಿಬ್ಬಂದಿ ರಜೆ ಕಾರಣ ನೀಡಿ ಗ್ರಾಹಕರಿಗೆ ತೊಂದರೆಯಾದ ಬಗ್ಗೆ ಅನ್ವರ್ ಆಲಿ ಕಾಪು ದೂರಿದರು. ಈ ಬಗ್ಗೆ ಶಾಖಾಧಿಕಾರಿ ಬಳಿ ಸ್ಪಷ್ಟನೆ ಕೇಳಿದ ರಾಕೇಶ್ ತುರ್ತು ಸಂದರ್ಭದಲ್ಲಿ ಅಗತ್ಯ ಸಿಬ್ಬಂದಿಯೊಂದಿಗೆ ಸಮಸ್ಯೆ ಬಗೆಹರಿಸುವಂತೆ ತಾಕೀತು ವಾಡಿದರು.