ಶೃಂಗೇರಿ ಪೀಠದ ಉಡುಪಿ ಪ್ರಾಂತ್ಯ ಧಮಾರ್ಧಿಕಾರಿ ವಾಗೀಶ್​ ಶಾಸ್ತ್ರಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.  
ಉಡುಪಿ

ಶಂಕರ ವಿಜಯೋತ್ಸವ ಹಿಂದೂ ಸಮಾಜದ ಏಕತೆ ನಾಂದಿಯಾಗಲಿ: ಕೋಟ

ಉಡುಪಿ: ಶಂಕರ ವಿಜಯೋತ್ಸವದಲ್ಲಿ ಕೇವಲ ಉಡುಪಿ ಜಿಲ್ಲೆ ಮಾತ್ರವಲ್ಲದೆ, ರಾಜ್ಯಾದ್ಯಂತ ಜನರು ಭಾಗವಹಿಸುವಂತಾಗಬೇಕು. ಇಂದಿನ ದಿನಮಾನದಲ್ಲಿ ಅನೇಕ ಸಾಮಾಜಿಕ ಸ್ಥಿತ್ಯಂತರಗಳು ನಡೆಯುತ್ತಿವೆ. ಸಂಘಟನೆಯಿಲ್ಲದೆ ಮನುಷ್ಯ ಬದುಕಲಿಕ್ಕೆ ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ ಸಮಾಜ ಬದಲಾಗಿದೆ. ಹಾಗಾಗಿ ಇಡೀ ಹಿಂದೂ ಸಮಾಜವನ್ನ ಕ್ರೋಢಿಕರಿಸಿ, ಒಗ್ಗಟ್ಟಿನಿಂದ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವ ಸಂದೇಶ ಶಂಕರ ವಿಜಯೋತ್ಸವ ಮೂಲಕ ಸಮಾಜಕ್ಕೆ ತಲುಪಬೇಕು. ಇಲ್ಲದಿದ್ದರೆ ಮುಂದಿನ ತಲೆಮಾರಿಗೆ ಬದುಕು ಭೀಕರವಾಗಬಹುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಎಂ ಜಿಎಂ ಕಾಲೇಜಿನ ಮೈದಾನದಲ್ಲಿ ಡಿ. 28, 29 ಮತ್ತು 30ರಂದು ಆಯೋಜಿಸಿರುವ ಶ್ರೀ ಶಂಕರ ವಿಜಯೋತ್ಸವ ಪೂರ್ವಭಾವಿ ಸಭೆ ಹಾಗೂ ಆರಂಭೋತ್ಸವದಲ್ಲಿ ಮಾತನಾಡಿದರು.

ಶಂಕರೋತ್ಸವದ ಮೂಲಕ ಇಡೀ ಹಿಂದೂ ಸಮಾಜ ಒಟ್ಟಾಗಿ ಪಾಲ್ಗೊಳ್ಳಬೇಕು. ಉತ್ಸವದಲ್ಲಿ ಸಾಮಾಜಿಕ ಸಂದೇಶಗಳು, ಧಾರ್ಮಿಕ ಪ್ರವಚನಗಳು ಪ್ರತಿ ಮನುಷ್ಯನ ಬದುಕಿನಲ್ಲಿ ಹೊಸ ಶಕ್ತಿಯನ್ನು, ಹೊಸ ಆತ್ಮವಿಶ್ವಾಸವನ್ನು ಮೂಡಿಸಬೇಕು. ಎಂಟನೇ ಶತಮಾನದಲ್ಲಿ ಶಂಕರಾಚಾರ್ಯರು ಉದ್ಭವಿಸಿ, ಅವರು ಮಾಡಿರುವಂತಹ ಸಾಮಾಜಿಕ ಪರಿವರ್ತನೆಯ ಸಂದೇಶಗಳು ಇವತ್ತು ಕೂಡ ಸಮಾಜದ ಮುಂದಿದೆ ಎಂದರು.

ಹಿಂದೂವಿನಲ್ಲಿ ಅನಾಥಪ್ರಜ್ಞೆ

ಹಿಂದೂ ಇವತ್ತು ಅನಾಥ ಪ್ರಜ್ಞೆಯನ್ನು ಅನುಭವಿಸುವಂತ ಜಗತ್ತಿನ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರಾಗಿ ಬಿಟ್ಟಿದ್ದಾರೆ. ಕಾಶ್ಮೀರದಲ್ಲಿ 23 ಜನರನ್ನು ಹಿಂದೂ ಎಂಬ ಕಾರಣಕ್ಕೆ ಕೊಂದಿದ್ದಾರೆ. ಗುಂಡಿಟ್ಟವ ಜಾತಿ ಕೇಳಲಿಲ್ಲ. ಹೀಗಾಗಿ ಹಿಂದೂಗಳ ಭಾವನೆಗಳಲ್ಲಿ ಸಾಮಾಜಿಕ ಪ್ರಜ್ಞೆಗಳು ಜಾಗೃತವಾಗದಿದ್ದರೆ ಮುಂದಿನ ತಲೆಮಾರು ಮತ್ತಷ್ಟು ಗಂಡಾಂತರ ಎದುರಿಸುವ ಅಪಾಯವಿದೆ ಎಂದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶೃಂಗೇರಿ ಪೀಠದ ಉಡುಪಿ ಪ್ರಾಂತ್ಯ ಧಮಾರ್ಧಿಕಾರಿ ವಾಗೀಶ್​ ಶಾಸ್ತ್ರಿ ಮಾತನಾಡಿ, ವೈದಿಕ ಧರ್ಮ ಮತ್ತು ಸನಾತನ ಸಂಸತಿ ಉಳಿಸಿದ ಮಹಾಪುರುಷ ಶಂಕರಾಚಾರ್ಯರ ಸ್ಮರಣೆ ಅವಶ್ಯವಾಗಿದ್ದು, ಶಂಕರಾಚಾರ್ಯರ ಶಿಷ್ಯರಲ್ಲಿ ಒಬ್ಬರಾದ ಹಸ್ತಾಮಲಕರು ಉಡುಪಿ ಮೂಲದವರಾಗಿದ್ದು, ಪುರಿ ಗೋವರ್ಧನ ಪೀಠದ ಪ್ರಥಮ ಪೀಠಾಧಿಪತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ನಡೆಯುವ ಶಂಕರ ವಿಜಯೋತ್ಸವ ಹೆಚ್ಚು ಮಹತ್ವ ಪಡೆದಿದೆ ಎಂದು ತಿಳಿಸಿದರು.

ಶಾಸಕ ಯಶಪಾಲ್​ ಎ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಪ್ರಾಂತ್ಯದ ಧಮಾರ್ಧಿಕಾರಿ ಲೋಕೇಶ್​ ಅಡಿಗ, ಶೃಂಗೇರಿ ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣಮೂರ್ತಿ, ಮಂಗಳೂರು ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾ, ಶಂಕರ ತತ್ವಪ್ರಚಾರ ಸಮಿತಿ ಸಂಚಾಲಕ ತೇಜಶಂಕರ ಸೋಮಯಾಜಿ, ಪ್ರಮುಖರಾದ ಗಣೇಶ್​ ಹೆಬ್ಬಾರ್​, ಡಾ. ವಿದ್ಯಾ ರಾವ್​, ವಿಶ್ವನಾಥ ಭಟ್​, ಉಮೇಶ್​ ನಾಯ್ಕ ಉಪಸ್ಥಿತರಿದ್ದರು.

ಶ್ರೀ ಶಂಕರ ವಿಜಯೋತ್ಸವ ಕಾರ್ಯಾಧ್ಯಕ್ಷ ಮಹೇಶ್​ ಠಾಕೂರ್​ ಪರ್ಕಳ ಸ್ವಾಗತಿಸಿ, ಪ್ರಸ್ತಾವನೆಗೈದರು. ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು.