ಉಡುಪಿಯ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ನೀಟ್​ ಪೂರ್ವಭಾವಿ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಅಬೀದ್​ ಗದ್ಯಾಳ, ಸುಧಾಕರ್​ ನಾಯಕ್​, ಮಾರುತಿ, ವಸಂತ ಪದ್ಮಶಾಲಿ ಇತರರಿದ್ದರು. 
ಉಡುಪಿ

ಲೋಪವಾಗದಂತೆ ನಡೆಸಿ ನೀಟ್​ ಮರು ಪರೀಕ್ಷೆ

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಸೂಚನೆ

* ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ

ಉಡುಪಿ: ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ ವತಿಯಿಂದ ಜಿಲ್ಲೆಯಲ್ಲಿ ಜೂ.21ರಂದು ಒಟ್ಟು 6 ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾಹ್ನ 2ರಿಂದ ಸಂಜೆ 5:15ರ ವರೆಗೆ ನೀಟ್​ (ಯುಜಿ) ಮರು ಪರೀಕ್ಷೆ ನಡೆಯಲಿದೆ. ಯಾವುದೇ ಲೋಪದೋಷ ಆಗದಂತೆ ಪಾರದರ್ಶಕವಾಗಿ ಆಯೋಜಿಸಲು ಅಗತ್ಯವಿರುವ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ (ಜೂ.18) ಆಯೋಜಿಸಿದ್ದ ಸಭೆಯಲ್ಲಿ ನೀಟ್​ ಮರು ಪರೀಕ್ಷೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಒಟ್ಟು 2,970 ವಿದ್ಯಾರ್ಥಿಗಳು

ಜಿಲ್ಲೆಯಲ್ಲಿ 938 ಬಾಲಕರು, 2,032 ಬಾಲಕಿಯರು, 7 ಪಿ.ಡಬ್ಲು.ಬಿ.ಡಿ. ಅಭ್ಯರ್ಥಿಗಳು ಹಾಗೂ 1 ಸ್ಕ್ರೈಬ್​ ಸೌಲಭ್ಯ ಪಡೆದಿರುವ ಅಭ್ಯರ್ಥಿ ಸೇರಿ ಒಟ್ಟು 2,970 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಅವರಿಗೆ ಗೊಂದಲ ಉಂಟಾಗದಂತೆ ಪರೀಕ್ಷಾ ಕಾರ್ಯ ನಡೆಸಬೇಕು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚುವರಿ 15 ನಿಮಿಷ ಕಾಲಾವಕಾಶ ನೀಡಲಾಗಿದೆ. ವಿಕಲಚೇತನ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಒಂದು ಗಂಟೆ ಹೆಚ್ಚು ಸಮಯಾವಕಾಶ ಇರಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1:30ರ ವರೆಗೆ ವಿದ್ಯಾರ್ಥಿಗಳ ಪರಿಶೋಧ ಕಾರ್ಯ ನಡೆಸಿ, ಕೊಠಡಿಗಳಿಗೆ ತೆರಳಲು ಅನುವು ಮಾಡಿಕೊಡಬೇಕು. ನಂತರ ಬರುವವರಿಗೆ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದರು.
ಸಿಸಿಟಿವಿ ಕಡ್ಡಾಯ
ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಕೇಂದ್ರಗಳ ಸುತ್ತಮುತ್ತ ಸೂಕ್ತ ಪೊಲೀಸ್​ ಭದ್ರತೆ ಒದಗಿಸಬೇಕು. ಪ್ರಶ್ನೆ ಪತ್ರಿಕೆ ತರಿಸಿಕೊಳ್ಳಲು, ಉತ್ತರ ಪತ್ರಿಕೆ ರವಾನಿಸಲು ವಾಹನ ಸಿದ್ಧವಾಗಿಟ್ಟುಕೊಳ್ಳಬೇಕು. ವಿದ್ಯುತ್​ ಕಡಿತ ಮಾಡಬಾರದು. ತುರ್ತು ಸಂದರ್ಭ ಎದುರಿಸಲು ಅಗ್ನಿ ಶಾಮಕ ವಾಹನಗಳೂ ಸನ್ನದ್ಧವಾಗಿರಬೇಕು. ಮುಂಜಾಗ್ರತೆಯಾಗಿ ಎಲ್ಲ ಪರೀಕ್ಷಾ ಕೇಂದ್ರಗಳಿಗೂ ಆರೋಗ್ಯ ಸಹಾಯಕರನ್ನು ನೇಮಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚಿಸಿದರು.

ಮೆಟಲ್​ ಡಿಟೆಕ್ಟರ್​ ಅಳವಡಿಕೆ 

ನೀಟ್​ ಜಿಲ್ಲಾ ನೋಡಲ್​ ಅಧಿಕಾರಿಯಾದ ಉಡುಪಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಎನ್​.ಕರೀಂ ಖಾನ್​ ಮಾತನಾಡಿ, ಆರು ಪರೀಕ್ಷಾ ಕೇಂದ್ರಗಳಾದ ಅಜ್ಜರಕಾಡು ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕೋಟ ವಿವೇಕ ಪಿಯು ಕಾಲೇಜು, ಉಡುಪಿಯ ಎಂಜಿಎಂ ಪಿಯು ಕಾಲೇಜು, ಉಡುಪಿಯ ಸರ್ಕಾರಿ ಪಿಯು ಬೋರ್ಡ್​, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಬ್ರಹ್ಮಾವರದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ವತಿಯಿಂದ ಮೆಟಲ್​ ಡಿಟೆಕ್ಟರ್​ ಅಳವಡಿಸಲಾಗಿದೆ. ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಪರಿಶೀಲಿಸಬೇಕು. ಬಯೋಮೆಟ್ರಿಕ್​ ದೃಢೀಕರಣದ ನಂತರವೇ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ನೀಡಬೇಕು. ಪರೀಕ್ಷೆ ಮುಗಿದ ಬಳಿಕ ವ್ಯವಸ್ಥಿತವಾಗಿ ಒಎಂಆರ್​ ಶೀಟ್​ ಜೋಡಿಸಿ, ಮಾರ್ಗಸೂಚಿ ಪ್ರಕಾರ ಕ್ರಮ ವಹಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸುಧಾಕರ್​ ನಾಯಕ್​, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ನೀಟ್​ ಡೆಪ್ಯೂಟಿ ಸಿಟಿ ಕೋ-ಆರ್ಡಿನೇಟರ್​ ಕೇಂದ್ರೀಯ ವಿದ್ಯಾಲಯದ ಶಿಕ್ಷಕ ವಸಂತ ಪದ್ಮಶಾಲಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಮೂಲ ಗುರುತಿನ ಚೀಟಿ ಅಗತ್ಯ
ನೀಟ್​ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಮೊಬೈಲ್​ ಫೋನ್​, ಸ್ಮಾರ್ಟ್​ ವಾಚ್​, ಕ್ಯಾಲ್ಕುಲೇಟರ್​, ಬ್ಲೂಟೂತ್​ ಡಿವೈಸ್​, ಇಯರ್​ ಫೋನ್ಸ್​ ಸೇರಿದಂತೆ ಯಾವುದೇ ಇಲೆಕ್ಟ್ರಾನಿಕ್​ ಉಪಕರಣ ಮತ್ತು ವಾಲೆಟ್ಸ್​, ಹ್ಯಾಂಡ್​ ಬ್ಯಾಗ್​ ಧರಿಸಿ ಬರುವುದು ನಿಷೇಧ. ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಯಾವುದಾದರೊಂದು ಮೂಲ ಗುರುತಿನ ಚೀಟಿಯೊಂದಿಗೆ (ಕಾಲೇಜಿನ ಗುರುತಿನ ಚೀಟಿ, ಡೆವಿಂಗ್​ ಲೈಸೆನ್ಸ್​, ಆಧಾರ್​ ಕಾರ್ಡ್​, ಪಾನ್​ ಕಾರ್ಡ್​ ಇನ್ನಿತರ ಮೂಲಪ್ರತಿ) ಸೂಚನೆಯಲ್ಲಿ ತಿಳಿಸಿರುವಂತೆ 2 ಭಾವಚಿತ್ರಗಳೊಂದಿಗೆ ಪರೀಕ್ಷೆಗೆ ಹಾಜರಿರಬೇಕು ಎಂದು ಡಿಸಿ ಸ್ವರೂಪಾ ಸೂಚಿಸಿದರು.