ಉಡುಪಿಯಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಕಾರ್ಯಾಗಾರದ ಪೂರ್ವಭಾವಿ ಸಭೆಯಲ್ಲಿ ಪ್ರೇಮಮೂರ್ತಿ ಕೆ. ಮಾತನಾಡಿದರು. ರತ್ನಾ, ಗಣನಾಥ್​ ಶೆಟ್ಟಿ, ಡಾ. ನಿಕೇತನಾ, ವಿಶ್ವನಾಥ್​ ಹೆಗಡೆ ಇತರರಿದ್ದರು. 
ಉಡುಪಿ

ಹಿರಿಯ ನಾಗರಿಕರ ಶ್ರೇಯಸ್ಸಿಗಾಗಿ ಕಾರ್ಯಾಗಾರ

* ಇಲಾಖೆಯ ಉಪನಿರ್ದೇಶಕ ಪ್ರೇಮಮೂರ್ತಿ ಕೆ. ಮಾಹಿತಿ

* ಉಡುಪಿಯಲ್ಲಿ ಕಾರ್ಯಕ್ರಮ ಅನುಷ್ಠಾನ ಪೂರ್ವಭಾವಿ ಸಭೆ

ಉಡುಪಿ: ಕೇಂದ್ರ ಸರ್ಕಾರದ ಸ್ಟೇಟ್​ ಆ್ಯಕ್ಷನ್​ ಪ್ಲ್ಯಾನ್​ ಫಾರ್​ ಸೀನಿಯರ್​ ಸಿಟಿಜನ್​ ಯೋಜನೆಯಡಿ ಜಿಲ್ಲೆಯ ಹಿರಿಯ ನಾಗರಿಕರಿಗೆ ವಿವಿಧ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕಿದೆ. ತನ್ನಿಮಿತ್ತ ಅವರ ಶ್ರೇಯಸ್ಸಿಗಾಗಿ ಒಂದು ದಿನದ ಕಾರ್ಯಾಗಾರ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮಮೂರ್ತಿ ಕೆ. ತಿಳಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಎನ್​ಐಸಿ ಹಾಲ್​ನಲ್ಲಿ ಶನಿವಾರ (ಆ.29) ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು.

ವಿವಿಧ ಕಾರ್ಯಕ್ರಮ

ಪ್ರಸಕ್ತ ಸಾಲಿನಲ್ಲಿ ಯೋಜನೆಯಡಿ ಹಿರಿಯ ನಾಗರಿಕರಿಗೆ ಒಂದು ದಿನದ ನೃತ್ಯ ಚಿಕಿತ್ಸೆ (ಲಘು ಚಲನೆಯ ವ್ಯಾಯಾಮ), ಕಲಾ ಚಿಕಿತ್ಸೆ, ಏಕಪಾತ್ರಾಭಿನಯ ಮತ್ತು ಸಂಗೀತ ಚಿಕಿತ್ಸಾ ಕಾರ್ಯಕ್ರಮ ನಡೆಯಲಿದೆ. ಇಂಟರ್​ ಜೆನರೇಷನ್​ ಬಾಂಡಿಂಗ್​ ಮೇಳ, ಆರೋಗ್ಯ ಮತ್ತು ವೈದ್ಯಕೀಯ ಶಿಬಿರ, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ-2007ರ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕಾರ್ಯಾಗಾರ ನಡೆಯಲಿದೆ. ತಾಲೂಕು ಮಟ್ಟದಲ್ಲಿ ಕಾನೂನು ಅರಿವು ಮತ್ತು ಸಹಾಯ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ರೆಡ್​ಕ್ರಾಸ್​ ಜಿಲ್ಲಾ ಕಾರ್ಯದರ್ಶಿ ಗಣನಾಥ್​ ಶೆಟ್ಟಿ, ಡಾ.ಜಿ.ಶಂಕರ್​ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನಾ, ಹಿರಿಯ ನಾಗರಿಕರ ಜಿಲ್ಲಾ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್​ ಹೆಗಡೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಕಾರ್ಯದರ್ಶಿ ಮಮತಾ ಶೆಟ್ಟಿ, ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಶತಾಯುಷಿಗಳಿಗೆ ಸನ್ಮಾನ

ಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆರೋಗ್ಯ ತಪಾಸಣೆ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ಆಪ್ತಸಮಾಲೋಚನೆ ಕೈಗೊಳ್ಳಲಾಗುತ್ತಿದೆ. ಅವರ ಆರೋಗ್ಯ ಹಾಗೂ ಸುರಕ್ಷತೆ ಗಮನದಲ್ಲಿಟ್ಟುಕೊಂಡು ವಯೋಮಾನಕ್ಕೆ ತಕ್ಕ ಚಟುವಟಿಕೆ ಆಯೋಜಿಸಬೇಕು. ಇದೇ ಸಂದರ್ಭದಲ್ಲಿ ಶತಾಯುಷಿಗಳಿಗೆ ಸನ್ಮಾನ ಮಾಡಲಾಗುವುದು. ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು, ಹಿರಿಯ ನಾಗರಿಕರ ಸಂಘಗಳು, ಸ್ವಯಂಸೇವಾ ಸಂಸ್ಥೆಗಳು ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮುತುವರ್ಜಿ ವಹಿಸಬೇಕು ಎಂದು ಪ್ರೇಮಮೂರ್ತಿ ಕೆ. ತಿಳಿಸಿದರು.