ಉಡುಪಿ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗಣೇಶೋತ್ಸವದ ಪೂರ್ವಭಾವಿ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಅಬೀದ್ ಗದ್ಯಾಳ್, ಸುಧಾಕರ್ ನಾಯಕ್, ಡಾ.ಉದಯ್ ಶೆಟ್ಟಿ, ಡಾ. ಮಹೇಶ್ವರಿ ಸಿಂಗ್ ಇತರಿದ್ದರು.
* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಕರೆ
* ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ
ಉಡುಪಿ: ಗೌರಿ&ಗಣೇಶ ಹಬ್ಬವು ಸೆ.13 ಮತ್ತು 14ರಂದು ನಡೆಯಲಿದ್ದು ಪರಿಸರ ಹಾಗೂ ಜಲಸಂಪನ್ಮೂಲಗಳನ್ನು ಸಂರಕ್ಷಿಸಲು ಎಲ್ಲರೂ ಸಹಕರಿಸಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳಿಂದ ಪರಿಸರ ನಾಶವಾಗಲಿದೆ. ಹೀಗಾಗಿ ಮಣ್ಣಿನಿಂದ ನಿರ್ಮಿತ ಗಣಪನನ್ನೇ ಪ್ರತಿಷ್ಠಾಪಿಸಿ ಶ್ರದ್ಧಾ-ಭಕ್ತಿಯಿಂದ ಹಾಗೂ ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಕರೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಸೆ.11) ಆಯೋಜಿಸಿದ್ದ ಗಣೇಶನ ಹಬ್ಬ ಆಚರಣೆಯಂದು ಪಾಲಿಸಬೇಕಾದ ಕಾನೂನು ಸುವಸ್ಯವಸ್ಥೆ ಹಾಗೂ ಇನ್ನಿತರ ವಿಷಯಗಳ ಚರ್ಚಾ ಸಭೆಯಲ್ಲಿ ಮಾತನಾಡಿದರು.
ನಿಗದಿತ ಸ್ಥಳದಲ್ಲಿ ವಿಸರ್ಜಿಸಬೇಕು
ನೈಸರ್ಗಿಕ ಜಲಮೂಲಗಳ ಮೇಲಿನ ಒತ್ತಡ ಕಡಿಮೆ ಮಾಡಲು ಸ್ಥಳೀಯ ಸಂಸ್ಥೆ ನಿಗದಿಪಡಿಸಿರುವ ತಾತ್ಕಾಲಿಕ ಅಥವಾ ಕೃತಕ ವಿಸರ್ಜನಾ ತೊಟ್ಟಿಗಳಲ್ಲಿಯೇ ವಿಗ್ರಹ ವಿಸರ್ಜಿಸಬೇಕು. ಆ ಸಂದರ್ಭದಲ್ಲಿ ಹಸಿಕಸ ಹಾಗೂ ಒಣಕಸ ನೀರಿಗೆ ಎಸೆಯದೆ ಪ್ರತ್ಯೇಕವಾಗಿ ವಿಂಗಡಿಸಿ ವಿಲೇವಾರಿ ಮಾಡಲು ಕ್ರಮವಹಿಸಬೇಕು. ನದಿ, ಕೆರೆ, ಕೊಳ ಅಥವಾ ಇನ್ನಿತರ ಕಡೆಗಳಲ್ಲಿರುವ ಜಲಮೂಲಗಳಲ್ಲಿ ಮೂರ್ತಿ ವಿಸರ್ಜನೆ ಅನಿವಾರ್ಯವಾದಾಗ ಅಂತಹ ಸ್ಥಳಗಳಲ್ಲಿ ಸುರಕ್ಷತಾ ಕ್ರಮ, ಮೌಲ ಸೌಕರ್ಯ ಒದಗಿಸಬೇಕು. ರಕ್ಷಣಾ ತಂಡ, ಅಗತ್ಯ ಸಿಬ್ಬಂದಿ ನಿಯೋಜಿಸಬೇಕು ಎಂದರು.
ಅನುಮತಿ ಕಡ್ಡಾಯ
ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಗಣಪನ ಪ್ರತಿಷ್ಠಾಪನೆಗೆ ಸ್ಥಳೀಯ ಸಂಸ್ಥೆಗಳಿಂದ ಮತ್ತು ಧ್ವನಿವರ್ಧಕ ಬಳಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಉತ್ಸವದ ಸಂದರ್ಭದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್, ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಮಾತ್ರ ಧ್ವನಿ ವರ್ಧಕ ಬಳಸುವುದು, ವಿಗ್ರಹಗಳ ವಿಸರ್ಜನೆಯ ವೇಳೆ ಹಸಿರು ಪಟಾಕಿಯನ್ನೇ ಬಳಸಬೇಕು. ಇನ್ನಿತರ ಯಾವುದೇ ಪಟಾಕಿ ಸುಡುವುದನ್ನು ನಿಷೇಧಿಸಲಾಗಿದೆ. ಈ ಕುರಿತು ಶಾಲಾ-ಕಾಲೇಜು, ಸಾಮಾಜಿಕ ಜಾಲತಾಣ ಹಾಗೂ ಸರ್ಕಾರೇತರ ಸಂಸ್ಥೆಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎಎಸ್ಪಿ ಸುಧಾಕರ್ ನಾಯಕ್, ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಉದಯ್ ಶೆಟ್ಟಿ, ಜಿಲ್ಲಾ ಪರಿಸರ ಅಧಿಕಾರಿ ಡಾ. ಮಹೇಶ್ವರಿ ಸಿಂಗ್, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಾಲೂಕುಗಳ ತಹಸೀಲ್ದಾರರು, ಇಒಗಳು ಉಪಸ್ಥಿತರಿದ್ದರು.
ಪಿಒಪಿ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ತಡೆಗಟ್ಟಲು ಹಬ್ಬಕ್ಕೆ ಮುಂಚಿತವಾಗಿಯೇ ಮೂರ್ತಿ ತಯಾರಿಕಾ ಘಟಕ, ಸಂಗ್ರಹಣಾ ಗೋದಾಮು ಮತ್ತು ಮಾರಾಟ ಕೇಂದ್ರಗಳ ಮೇಲೆ ನಿರಂತರ ತಪಾಸಣೆ ನಡೆಸಬೇಕು. ಪಿಒಪಿ ಮೂರ್ತಿಗಳು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮೆರವಣಿಗೆ ಸಾಗುವ ಮಾರ್ಗದಲ್ಲಿ ವಿದ್ಯುತ್ ತಂತಿಗಳಿಂದ ಯಾವುದೇ ಅವಘಡಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು.