ಕರಂಬಳ್ಳಿ ವಾರ್ಡ್​ ವಿಎಂ ನಗರದಲ್ಲಿ ರಾಜ ಕಾಲುವೆಯಲ್ಲಿ ಗಿಡಗಂಟಿಗಳನ್ನು ತೆರವು ಮಾಡುತ್ತಿರುವ ಕಾರ್ಮಿಕರು.  
ಉಡುಪಿ

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮಳೆಗಾಲಕ್ಕೆ ಬಿರುಸಿನ ಸಿದ್ಧತೆ

ಉಡುಪಿ: ನಗರಸಭೆ ಹಾಗೂ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳಿಯ ಸಂಸ್ಥೆಗಳು ಮಳೆಗಾಲಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಚರಂಡಿ ಮತ್ತು ತೋಡುಗಳನ್ನು ಜೆಸಿಬಿ ಬಳಸಿ ಸ್ವಚ್ಛಗೊಳಿಸುತ್ತಿದ್ದಾರೆ. ಈಗಾಗಲೇ ಶೇ.60ರಷ್ಟು ಕೆಲಸಗಳು ಪೂರ್ಣಗೊಂಡಿವೆ.

ಪ್ರತಿ ವರ್ಷ ಮಳೆಗಾಲದಲ್ಲಿ ಕೃತಕ ಪ್ರವಾಹ ಹಾಗೂ ನೆರೆಭೀತಿ ಎದುರಿಸುವ ಪ್ರಮುಖ ತಗ್ಗು ಪ್ರದೇಶಗಳು ಮತ್ತು ಸೂಕ್ಷ ವಲಯಗಳನ್ನು ಗುರುತಿಸಲಾಗಿದ್ದು, ಸ್ವಚ್ಛತಾ ಕಾರ್ಯಕ್ಕಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಜ್ಜರಕಾಡು, ಕರಂಬಳ್ಳಿ, ಬನ್ನಂಜೆ, ಗುಂಡಿಬೈಲು, ಅಂಬಲಪಾಡಿ, ಆದಿಉಡುಪಿ ಭಾಗದಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿದೆ.

ನಗರಸಭೆ ದೊಡ್ಡ ತೋಡುಗಳ ಹೂಳೆತ್ತುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಣ್ಣ ಸಣ್ಣ ತೋಡು, ಚರಂಡಿಗಳನ್ನು ಸ್ಚಚ್ಛಗೊಳಿಸಬೇಕು. ಇಲ್ಲದಿದ್ದರೆ ರಸ್ತೆ ಮೇಲೆಯೇ ಮಳೆ ನೀರು ಹರಿಯುವ ಸಾಧ್ಯತೆಗಳಿವೆ. ಜತೆಗೆ ತಡದಲ್ಲಿ ಶೇಖರಿಸಿದ ಕಸಕಡ್ಡಿಗಳನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ಮತ್ತೆ ಮಳೆಗೆ ತೋಡು ಸೇರುತ್ತವೆ ಎಂಬುದು ಸ್ಥಳಿಯರ ಅಭಿಪ್ರಾಯ.

2 ವರ್ಷಕ್ಕೊಮ್ಮೆ ಹೂಳು ತೆರವು

ಕಲ್ಸಂಕ ತೋಡು (ಇಂದ್ರಾಳಿ ನದಿ) ಪಾತ್ರದಲ್ಲಿ ಅತಿ ಹೆಚ್ಚು ನೆರೆ ಭೀತಿ ಇರುತ್ತದೆ. ಮಳೆ ತೀವ್ರಗೊಂಡಾಗ ಕಲ್ಸಂಕ ತೋಡಿನ ನೀರು ಉಕ್ಕಿ ಬೈಲಕೆರೆ ಪರಿಸರದ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಿರುತ್ತದೆ. ಕಲ್ಸಂಕದ ನೀರು ಸರಾಗವಾಗಿ ಹರಿದು ಹೋಗದಿದ್ದಾಗ, ಮಠದ ಪಾರ್ಕಿಂಗ್​ ಏರಿಯಾ ಸಂಪೂರ್ಣ ಜಲಾವೃತಗೊಳ್ಳುತ್ತದೆ. 2 ವರ್ಷಕ್ಕೊಮ್ಮೆ ಹೂಳು ತೆಗೆಯಲು ನಗರಸಭೆ ನಿಯಮ ರೂಪಿಸಿದ್ದು, ಕಳೆದ ವರ್ಷ ಜೆಸಿಬಿ ಬಳಸಿ ಹೂಳು ತೆಗೆಯಲಾಗಿದೆ. ಕಲ್ಸಂಕ ಜಂಕ್ಷನ್​ನಲ್ಲಿ ಗುಂಡಿಬೈಲು ಕಡೆಗೆ ಫ್ರೀ ಲೆಪ್ಟ್​ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲಕ್ಕೂ ಮುನ್ನ ಕೆಲಸ ಪೂರ್ಣಗೊಳ್ಳದಿದ್ದರೆ ರಸ್ತೆ ಬದಿ ಕುಸಿಯುವ ಭೀತಿ ಇದೆ.

ಸಮುದ್ರದ ಅಲೆಗಳ ಆರ್ಭಟ

ಮಲ್ಪೆ ಮತ್ತು ಕೊಡವೂರು ಭಾಗದಲ್ಲಿ ಸಮುದ್ರದ ಅಲೆಗಳ ಆರ್ಭಟ ಮತ್ತು ತಗ್ಗು ಪ್ರದೇಶಗಳ ಕಾರಣದಿಂದ ನೆರೆ ಭೀತಿ ಇದೆ. ಉದ್ಯಾವರ ಮತ್ತು ಕರಂಗಲ್ಪಾಡಿ ಗ್ರಾಮಗಳು ನದಿ ಪಾತ್ರಕ್ಕೆ ಹತ್ತಿರವಿರುವ ತಗ್ಗು ಪ್ರದೇಶಗಳಾಗಿದ್ದು, ತೋಟ ಹಾಗೂ ಮನೆಗಳಿಗೆ ನೀರು ಆವರಿಸುವ ಆತಂಕವಿರುತ್ತದೆ. ಉಪ್ಪೂರು ಭಾಗದಲ್ಲಿ ಸ್ವರ್ಣಾ ನದಿಯ ನೀರಿನಮಟ್ಟ ಹೆಚ್ಚಾದಾಗ ಇಲ್ಲಿನ ನದಿತೀರದ ಪ್ರದೇಶಗಳು ಜಲಾವೃತಗೊಳ್ಳುತ್ತವೆ.

ಕೃತಕ ಪ್ರವಾಹ ಸೃಷ್ಟಿ ಭೀತಿಬಡಗುಪೇಟೆಯಲ್ಲಿ ಕಲ್ಸಂಕ ತೋಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಚರಂಡಿಯಲ್ಲಿ ವಾಟರ್​ ಬಾಟಲಿಗಳು, ಕಸದಿಂದ ತುಂಬಿದ್ದು ಸ್ವಚ್ಛಗೊಳಿಸುವುದು ಅತೀ ಅಗತ್ಯವಾಗಿದೆ. ಇಲ್ಲದಿದ್ದರೆ ಅಂಗಡಿ ಮುಂಗಟ್ಟುಗಳಿಗೆ ಕೃತಕ ಪ್ರವಾಹದ ನೀರು ನುಗ್ಗುವ ಭೀತಿ ಇದೆ. ಗುಂಡಿಬೈಲು ಮತ್ತು ನಿಟ್ಟೂರು, ಕರಂಬಳ್ಳಿ ಮತ್ತು ಮಠದಬೆಟ್ಟು, ಬನ್ನಂಜೆ ಮತ್ತು ಮೂಡನಿಡಂಬೂರು ಅತ್ಯಂತ ಸೂಕ್ಷ್ಮ ನೆರೆ ಪೀಡಿತ ಪ್ರದೇಶಗಳಾಗಿದ್ದು, ರಾಜಕಾಲುವೆಗಳ ಹೂಳು ಮತ್ತು ಹೆದ್ದಾರಿ ಕಾಮಗಾರಿಗಳ ಕಾರಣದಿಂದಾಗಿ ನೀರು ಸರಾಗವಾಗಿ ಹೋಗದೆ ಕೃತಕ ಪ್ರವಾಹ ಸೃಷ್ಟಿಯಾಗುತ್ತವೆ. ಇಲ್ಲಿನ ನಿವಾಸಿಗಳನ್ನು ಪ್ರತಿ ವರ್ಷ ಮಳೆಗಾಲದಲ್ಲಿ ದೋಣಿಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪರಿಸ್ಥಿತಿ ನಿಮಾರ್ಣವಾಗುತ್ತದೆ.

ಮಳೆಗಾಲಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾಡಳಿತ ಹಾಗೂ ನಗರಸಭೆ ಬ್ಲಾಕ್​ ಸ್ಪಾಟ್​ಗಳನ್ನು ಗುರುತಿಸಿದೆ. ಹೆಚ್ಚುವರಿ ಸಿಬ್ಬಂದಿ ಮೂಲಕ ಹೂಳು ತೆಗೆಯುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ 3 ವಿಭಾಗ ಮಾಡಿಕೊಳ್ಳಲಾಗಿದ್ದು, ಬನ್ನಂಜೆ, ನಿಟ್ಟೂರು, ಕಲ್ಸಂಕ, ಮಣಿಪಾಲ, ಕಿನ್ನಿಮೂಲ್ಕಿ ಭಾಗದಲ್ಲಿ ಹಿಟಾಚಿ ಮೂಲಕ ಸ್ವಚ್ಛತಾ ಕಾರ್ಯ ನಿರ್ವಹಿಸಲಾಗುತ್ತಿದೆ. — ಮಹಾಂತೇಶ್​ ಹಂಗರಗಿ, ನಗರಸಭೆ ಪೌರಾಯುಕ್ತ