ಬೆಳ್ತಂಗಡಿ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಎಚ್ಚರಿಕೆ ನಾಮಲಕಗಳನ್ನು ಅಳವಡಿಸಿರುವುದು.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮಳೆಗಾಲದಲ್ಲಿ ಎದುರಾಗುವ ಸಂಭಾವ್ಯ ಪ್ರಾಕೃತಿಕ ವಿಕೋಪದ ಮುಂಜಾಗ್ರತೆಗಾಗಿ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿರುವ ಅಪಾಯಕಾರಿ ರಸ್ತೆ, ಸೇತುವೆ, ಕಾಲುಸಂಕಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ತಾಲೂಕಿನಲ್ಲಿರುವ 48 ಗ್ರಾಮ ಪಂಚಾಯಿತಿಗಳ ಅನೇಕ ಕಡೆ ಅಪಾಯಕಾರಿ ಸ್ಥಳಗಳಿವೆ ಎಂದು ಗುರುತಿಸಲಾಗಿದೆ. ನಡಾಯಿ ಸೇತುವೆ, ಕೊಕ್ರಾಡಿ ಪರಾವರ ಕೊಟ್ಟಿಗೆ ರಸ್ತೆ ಕಾಲು ಸಂಕ, ಕೊಮ್ಮಡ ಸೇತುವೆ, ಕುದುಂಬುಡ ರಸ್ತೆ, ಅರಸಿನಮಕ್ಕಿ ಸುದೆಗಂಡಿ ಸೇತುವೆ, ಕಾರಂದೂರು, ಗಿಳಿಕಾಪು, ಹಚ್ಚಾಡಿ ಸೇತುವೆ, ರಸ್ತೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಲಿಂಗದೋಡಿ, ಬೋಲೋಡಿ, ಕುಂಡಡ್ಕ ಸೇತುವೆ, ಹುಣ್ಸೆದಡಿ ಹಳ್ಳ, ಮಂಗಿಲ, ನಾಗಕಲ್ಲು, ಕೊಲ್ಪಾಡಿ, ಕೆಳಗಿನ ಕೋಲ್ಪಾಡಿ, ತೋಟತ್ತಾಡಿ ದಡ್ಡು, ಇಳಂತಿಲ ಗ್ರಾಮದ ಎರಡು ಕಡೆ, ಬೈರೋಡಿ, ಅಮ್ಮಿನಡ್ಕ, ಕಳಿಯದ ಎರಡು ಕಡೆ, ಗುತ್ತುಬೈಲು, ನೆಕ್ಕಿಲು, ಬೊಳ್ಳೂರಮಜಲು, ಪುತ್ತಿಲಪಲಾರು ರಸ್ತೆ, ಆದೂರು ಪೆರಾಲ್ ಶಾಲೆ, ಹರ್ಪಳ, ಉಮಿಲಾಯ ಕಾಲುಸಂಕ, ಪೆರ್ಮುಡ ರಸ್ತೆ, ಕಾಜಲ ಕಾಲು ಸಂಕ, ವಾಣಿಂಜಪದವು, ಕನ್ಯಾದೋಡಿ ಸೇತುವೆ, ಕಲ್ಲೋಳ, ಕಾಜೂರು, ದಿಡುಪೆ, ಕಂಬಳ ದಡ್ಡು ಚೌಕಿಬೆಟ್ಟು, ಕೊಪ್ಪದಗಂಡಿ, ಪಿಲತಡ್ಕ, ಗುರಿಪಳ್ಳ ಸೇತುವೆ, ಕಾಡಬಾಗಿಲು, ಪರ್ಪಲ, ಆಲಂಗಾಯ, ಕುದ್ರೆಂಜ, ಬರಾಯ, ಪದೆಂಜಿಲ, ತೋಡಬಾಗಿಲು, ಎರ್ಮೆತ್ತೋಡಿ, ಶಿಶಿಲೇಶ್ವರ ಕಿಂಡಿ ಅಣೆಕಟ್ಟು, ಬನಾರಿ, ಊರ್ಲಡ್ಕ, ಮೂಡಡ್ಕ, ಹೊಸಪಟ್ನ, ಹಲಗೂರು ಫಲ್ಗುಣಿ ಹೊಳೆಬದಿ ಸ್ಥಳಗಳನ್ನು ಅಪಾಯಕಾರಿ ಎಂದು ಗುರುತಿಸಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಹೊಸಂಗಡಿ, ಇಂದಬೆಟ್ಟು, ಕುವೆಟ್ಟು, ಕೊಕ್ಕಡ, ನಿಡ್ಲೆ, ಮಲವಂತಿಗೆ ಶಿಬಾಜೆ, ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅಪಾಯಕಾರಿ ಸ್ಥಳಗಳಿಲ್ಲ.
ಘಾಟಿ ರಸ್ತೆ, ನದಿಗಳು
ಬೆಳ್ತಂಗಡಿ ತಾಲೂಕಿನಲ್ಲಿ ಹಾದು ಹೋಗುವ ಚಾರ್ವಾಡಿ ಘಾಟಿ ರಸ್ತೆಯು ಅಪಾಯಕಾರಿಯಾಗಿದ್ದು, ಇಲ್ಲಿ ಮಳೆಗಾಲದ ವೇಳೆ ಪದೇಪದೆ ಮರ, ಬಂಡೆ ಹಾಗೂ ಕಲ್ಲು ರಸ್ತೆಗೆ ಉರುಳಿ ಬೀಳುವುದು ಸಾವಾನ್ಯವಾಗಿದೆ. ಜತೆಗೆ ಎಲ್ಲ ಹೊತ್ತಿನಲ್ಲೂ ಮಂಜಿನ ವಾತಾವರಣ ಇರುತ್ತದೆ. ತಾಲೂಕಿನ ಬೊಳ್ಳೆ, ದಿಡುಪೆ, ಎರ್ವಾಯಿ ಜಲಪಾತ ಪ್ರದೇಶಗಳು ಕೂಡ ಅಪಾಯಕಾರಿ. ನೇತ್ರಾವತಿ, ಮೃತ್ಯುಂಜಯ, ಫಲ್ಗುಣಿ, ಕಪಿಲಾ, ಸೋವಾವತಿ ನದಿಗಳು ತಾಲೂಕಿನಲ್ಲೇ ಹರಿಯುತ್ತಿದ್ದು, ಬಿರುಸಿನ ಮಳೆ ವೇಳೆ ನೆರೆ ಉಂಟಾಗುತ್ತದೆ. ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣಗೊಳ್ಳದ ಕಾರಣ ಈ ರಸ್ತೆಗಳಲ್ಲಿ ಸಂಚರಿಸುವಾಗ ಚಾಲಕರು ಮುನ್ನೆಚ್ಚರಿಕೆ ವಹಿಸಬೇಕಿದೆ.
ಮಳೆಗಾಲದ ಪೂರ್ವಸಿದ್ಧತೆ ಹಾಗೂ ಪ್ರಾಕೃತಿಕ ವಿಕೋಪದ ಮುಂಜಾಗ್ರತೆ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ತೀರ್ಮಾನಿಸಿದಂತೆ ಹಾಗೂ ತಹಸೀಲ್ದಾರರ ಅಧ್ಯಕ್ಷತೆ, ಕಾರ್ಯನಿರ್ವಾಹಕ ಅಧಿಕಾರಿ ಉಪಸ್ಥಿತಿಯಲ್ಲಿ ಜರುಗಿದ ಸಭೆಯ ನಡಾವಳಿಯಂತೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಲಾಗಿದೆ. ಸದರಿ ಸ್ಥಳಗಳಲ್ಲಿ ಟೇಪ್, ಬ್ಯಾರಿಕೇಡ್, ಬ್ಯಾನರ್, ರ್ಲಿೆಕ್ಟರ್‌ಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಈ ಸ್ಥಳಗಳಲ್ಲಿ ಸಂಚರಿಸುವಾಗ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
— ಭವಾನಿ ಶಂಕರ್, ಬೆಳ್ತಂಗಡಿ ತಾಪಂ ಇಒ