ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಸ್ವಚ್ಛತಾ ಕಾರ್ಯ.  
ಉಡುಪಿ

ಮುಂಗಾರು ಪೂರ್ವ ಸ್ವಚ್ಛತೆ ಚುರುಕು

ಇಂದಿರಾ ಎನ್ ಕೆ
ಹರಿಪ್ರಸಾದ್ ನಂದಳಿಕೆ ಕಾರ್ಕಳ

ಮಳೆಗಾಲದ ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆ ಸಾರ್ವಜನಿಕರಿಗೆ ಯಾವುದೆ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಸ್ವಚ್ಛತಾ ಕಾರ್ಯಗಳು ಚುರುಕುಗೊಂಡಿವೆ. ಮಳೆಗಾಲದಲ್ಲಿ ಎದುರಾಗಬಹುದಾದ ಕೃತಕ ನೆರೆ, ಸಾಂಕ್ರಾಮಿಕ ರೋಗಗಳ ಹರಡುವಿಕೆ ಹಾಗೂ ರಸ್ತೆ ಬದಿ ಕಸದ ಸಮಸ್ಯೆಗೆ ಮುಕ್ತಿ ಹಾಡಲು ಪುರಸಭೆ ಮುಂದಾಗಿದೆ.

23 ವಾರ್ಡ್‌ಗಳಲ್ಲೂ ಕಾರ್ಯಾಚರಣೆ

ಕಾರ್ಕಳ ಪುರಸಭೆಯ ಒಟ್ಟು 23 ವಾರ್ಡ್‌ಗಳಲ್ಲಿ ಹಂತ ಹಂತವಾಗಿ ಚರಂಡಿ, ಮೋರಿಗಳು ಹಾಗೂ ರಸ್ತೆ ಬದಿಯ ತ್ಯಾಜ್ಯ ತೆರವು ಕಾರ್ಯ ಕೈಗೊಳ್ಳಲಾಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗಿರುವ ಚರಂಡಿಗಳು ಮತ್ತು ಬೃಹತ್ ಮೋರಿಗಳಲ್ಲಿ ಸೇರಿಕೊಂಡಿರುವ ಹೂಳು, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಕಾರ್ಮಿಕರ ನೆರವಿನಿಂದ ತೆರವುಗೊಳಿಸಲಾಗುತ್ತಿದೆ. ರಸ್ತೆ ಬದಿಗಳಲ್ಲಿ ಬೆಳೆದು ನಿಂತಿರುವ ಪೊದೆಗಳನ್ನು ಕತ್ತರಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ತ್ಯಾಜ್ಯ, ಹೂಳು ಮುಕ್ತ ಚರಂಡಿ

40ಕ್ಕೂ ಅಧಿಕ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು, ಕಲ್ಲೊಟ್ಟೆ, ಬಂಡಿಮಠ, ಸಾಲ್ಮರ, ಬಂಗ್ಲೆಗುಡ್ಡೆ, ಪ್ರಮುಖ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲವಾಗುವಂತೆ ಚರಂಡಿಗಳಲ್ಲಿ ಜಮೆಯಾಗಿದ್ದ ಮಣ್ಣು, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ತೆರವುಗೊಳಿಸಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಸಾರ್ವಜನಿಕರು ಚರಂಡಿಗಳಿಗೆ ನೇರವಾಗಿ ತ್ಯಾಜ್ಯ ಎಸೆಯುತ್ತಿರುವುದರಿಂದ ನೀರು ಸರಿಯಾಗಿ ಹರಿಯದೆ ಕೃತಕ ನೆರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಪ್ಲಾಸ್ಟಿಕ್ ಹಾಗೂ ಇತರ ಕಸ ತೆರವುಗೊಳಿಸಿ ಸೂಕ್ತವಾಗಿ ವಿಲೇವಾರಿ ಮಾಡುತ್ತಿದ್ದಾರೆ.

ವಿಶೇಷ ಸಹಕಾರ

ಸ್ವಚ್ಛತಾ ಕಾರ್ಯಕ್ಕೆ ಸ್ಥಳೀಯ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡ ವಿಶೇಷ ಸಹಕಾರ ನೀಡುತ್ತಿದೆ. ವಾರಕ್ಕೊಮ್ಮೆ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ನಗರದ ವಿವಿಧ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವುದು ಗಮನಾರ್ಹ. ಬ್ರಿಗೇಡ್ ವತಿಯಿಂದ ಚರಂಡಿ ಸ್ವಚ್ಛತೆ, ಪ್ಲಾಸ್ಟಿಕ್ ತ್ಯಾಜ್ಯ ತೆರವು ಹಾಗೂ ರಸ್ತೆ ಬದಿಯ ಕಸ ಸಂಗ್ರಹ ಸೇರಿದಂತೆ ಹಲವು ಜನಜಾಗೃತಿ ಅಭಿಯಾನ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ.

ತುರ್ತು ಪರಿಸ್ಥಿತಿಗೆ ತಂಡ

ಮಳೆ-ಗಾಳಿ ವೇಳೆ ಅಲ್ಲಲ್ಲಿ ಮರಗಳು ರಸ್ತೆಗೆ ಬಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಅಪಾಯಕಾರಿ ಮರಗಳ ಕೊಂಬೆಗಳನ್ನು ಕತ್ತರಿಸುವ ಕಾರ್ಯಕ್ಕೂ ಸಿದ್ಧತೆ ನಡೆಸಲಾಗಿದ್ದು, ಮುಂಗಾರು ಅವಧಿಯಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದಲ್ಲಿ ತಕ್ಷಣ ಧಾವಿಸಲು ವಿಶೇಷ ತಂಡ ರಚಿಸಲಾಗಿದೆ. ಈಗಾಗಲೇ ಇತ್ತೀಚಿನ ಮಳೆಗೆ ಎರಡು-ಮೂರು ರಸ್ತೆಗಳಿಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ಈ ತಂಡ ಯಶಸ್ವಿಯಾಗಿ ತೆರವುಗೊಳಿಸಿದೆ.

ಮುಂಗಾರು ಆರಂಭಕ್ಕೆ ಇನ್ನು ಕೆಲ ದಿನಗಳು ಬಾಕಿ ಇರುವ ಮುನ್ನ ಪುರಸಭೆ ಎಚ್ಚೆತ್ತುಕೊಂಡು ಕೆಲಸ ಆರಂಭಿಸಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

— ಸತೀಶ್ ಕುಮಾರ್ ನಾಗರಿಕರು

ನಗರದ ಎಲ್ಲಿಯೂ ಕೃತಕ ನೆರೆ ಸೃಷ್ಟಿಯಾಗಿ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪ್ರಮುಖ ರಸ್ತೆಗಳ ಚರಂಡಿಗಳಲ್ಲಿರುವ ತ್ಯಾಜ್ಯ ಹಾಗೂ ಹೂಳು ತೆರವುಗೊಳಿಸುವ ಕೆಲಸ ಪ್ರಗತಿಯಲ್ಲಿದೆ. 23 ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಪೌರಕಾರ್ಮಿಕರು ವಿವಿಧ ತಂಡಗಳಾಗಿ ನಿಯೋಜನೆಗೊಂಡು ಕೆಲಸ ನಿರ್ವಹಿಸುತ್ತಿದ್ದಾರೆ.

— ಲೈಲಾ ಥಾಮಸ್ ಆರೋಗ್ಯ ನಿರೀಕ್ಷಕಿ, ಕಾರ್ಕಳ ಪುರಸಭೆ