ಉಡುಪಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಕಿದಿಯೂರು ಹೋಟೆಲ್ನ ಮಾಲೀಕ ಭುವನೇಂದ್ರ ಕಿದಿಯೂರು ಮಾತನಾಡಿದರು. ರವೀಂದ್ರ ನಾಯ್ಡು, ನವೀನ್ ಶೆಟ್ಟಿ, ವಿಲಾಸ್ಕುಮಾರ್, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಇದ್ದರು.
ಕಿದಿಯೂರು ಹೋಟೆಲ್ ಮಾಲೀಕ ಭುವನೇಂದ್ರ ಕಿದಿಯೂರು ಮಾಹಿತಿ
1ರಿಂದ 9ನೇ ತರಗತಿ ಮಕ್ಕಳಿಗೆ 3 ಕೋಟಿ ರೂ. ವಿದ್ಯಾರ್ಥಿ ವೇತನ
ಉಡುಪಿ: ಕಿದಿಯೂರು ಎಜುಕೇಷನ್ ಟ್ರಸ್ಟ್ ವತಿಯಿಂದ ನಿಟ್ಟೂರಿನಲ್ಲಿರುವ ಕಿದಿಯೂರ್ಸ್ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ಆಶ್ರಯದಲ್ಲಿ ಹಾಗೂ ಹೈದರಾಬಾದ್ನ ಆರ್ಜಿಎಫ್ ಸಂಸ್ಥೆಯ ಸಹಭಾಗಿತ್ವದಲ್ಲಿ ಪ್ರತಿಭಾನ್ವಿತರಿಗೆ ವಿದ್ಯಾರ್ಥಿ ವೇತನ ನೀಡಲು ಡಿ.21ರಂದು ಬೆಳಗ್ಗೆ 10ರಿಂದ 12ರ ವರೆಗೆ ಉಡುಪಿಯ ಕಿದಿಯೂರು ಹೋಟೆಲ್ನ ಅನಂತಶಯನ ಸಭಾಭವನದಲ್ಲಿ ಪ್ರತಿಭಾನ್ವೇಷಣಾ ಪರೀಕ್ಷೆ ಆಯೋಜಿಸಲಾಗಿದೆ ಎಂದು ಹೋಟೆಲ್ನ ಮಾಲೀಕ ಭುವನೇಂದ್ರ ಕಿದಿಯೂರು ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಗುರುವಾರ (ಡಿ.4) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿ ಹಾಗೂ ಸುತ್ತಮುತ್ತಲಿನ ಶಾಲೆಯ ಮತ್ತು ಯಾವುದೇ ಪಠ್ಯಕ್ರಮದ 1ರಿಂದ 9ನೇ ತರಗತಿ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಪರೀಕ್ಷೆಯಲ್ಲಿ ತಲಾ ಟಾಪ್-10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, 90ಕ್ಕೂ ಅಧಿಕ ಮಕ್ಕಳಿಗೆ ಒಟ್ಟು 3 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಸವಾಲು
ಹೈದರಾಬಾದ್ನ ಆರ್ಜಿಎಫ್ ಸಂಸ್ಥೆಯ ಸಿಇಒ ರವೀಂದ್ರ ನಾಯ್ಡು ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಇಂದು ಹೊಸ ಹೊಸ ಸವಾಲು ಎದುರಾಗುತ್ತಿದೆ. ಹೀಗಾಗಿ ಬಾಲ್ಯದಲ್ಲಿಯೇ ಮಕ್ಕಳಿಗೆ ಎಲ್ಲ ಸವಾಲು ಎದುರಿಸುವಂತಹ ಕೋಚಿಂಗ್ ನೀಡುವ ವ್ಯವಸ್ಥೆ ಭಾರದಲ್ಲಿಯೇ ಪ್ರಥಮ ಬಾರಿಗೆ ಕಿದಿಯೂರ್ಸ್ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ನಲ್ಲಿದೆ. ಅಲ್ಲದೆ, ಪಾಲಕರಿಗೂ ಸಹ ಸಮಯ ನಿರ್ವಹಣೆ ಹಾಗೂ ಮಕ್ಕಳ ಪಾಲನೆಯ ಕೌಶಲ ನೀಡುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಪರೀಕ್ಷೆ ಮುಗಿದ ದಿನವೇ ಟಾಪರ್ಸ್ಗಳ ಹೆಸರು ಘೋಷಣೆ ಆಗಲಿದೆ. ಆಯ್ಕೆಯಾಗುವ ಟಾಪರ್ಗಳಿಗೆ ಹಾಗೂ ಪಾಲಕರಿಗೆ ಆಸಕ್ತಿ ಇದ್ದಲ್ಲಿ ರಿಯಾಯಿತಿ ಶುಲ್ಕದಲ್ಲಿ ಕಿದಿಯೂರ್ಸ್ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ಗೆ ಸೇರುವ ಅವಕಾಶವೂ ಲಭಿಸಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನವೀನ್ ಶೆಟ್ಟಿ, ವಿಲಾಸ್ಕುಮಾರ್, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಇದ್ದರು.
ಸ್ಪರ್ಧಾತ್ಮಕ ಎಕ್ಸಾಂ ಎದುರಿಸಲು ಕೋಚಿಂಗ್
1ನೇ ತರಗತಿಯಿಂದಲೇ ಆ ಮಕ್ಕಳ ಧಾರಣಾ ಶಕ್ತಿಗೆ ಅನುಸಾರವಾಗಿ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅರಿವು ಮೂಡಿಸಿ, ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಪ್ರತಿಭಾನ್ವೇಷಣಾ ಪರೀಕ್ಷೆಯ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿಯೇ ಕಿದಿಯೂರ್ಸ್ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ನಲ್ಲಿ 1ರಿಂದ 5ನೇ ತರಗತಿಯ ವರೆಗಿನ ಮಕ್ಕಳಿಗೆ ಅಬಾಕಸ್, ರೋಬಾಟಿಕ್ಸ್, ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಇನ್ನಿತರ ಸ್ಪಾರ್ಕ್ ಕಾರ್ಯಕ್ರಮ ಹಾಗೂ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಐಐಟಿ, ಜೆಇಇ, ನೀಟ್, ಸಿವಿಲ್ ಸರ್ವೀಸಸ್, ಸಿಎ ಇನ್ನಿತರ ಇಂಟಿಗ್ರೇಟೆಡ್ ಫೌಂಡೇಷನ್ ಕೋಚಿಂಗ್ ನೀಡಲಾಗುತ್ತಿದೆ.
ಪ್ರತಿಭಾನ್ವೇಷಣಾ ವಿದ್ಯಾರ್ಥಿ ವೇತನ ಪರೀಕ್ಷೆಗೆ ಹೆಸರು ನೋಂದಣಿ ಮಾಡಬಹುದು. ಅಥವಾ ಡಿ.21ರಂದು ನೇರವಾಗಿ ಸ್ಥಳಕ್ಕಾಗಮಿಸಿ ಪರೀಕ್ಷೆ ಬರೆಯಬಹುದು. ಸುಮಾರು 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗುವ ನಿರೀಕ್ಷೆ ಇದೆ. ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಮಾಣಪತ್ರ ಹಾಗೂ ಪದಕ ನೀಡಲಾಗುವುದು.